ಸುದ್ಧಿಕನ್ನಡ ವಾರ್ತೆ
ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ವಾಯುಭಾರಕುಸಿತವುಂಟಾಗಿದ್ದು ಅಕ್ಟೋಬರ್ 24 ರಂದು ಗುರುವಾರ ಬಂಗಾಳಕೊಲ್ಲಿಯ ತೀರ ಪ್ರದೇಶಗಳಿಗೆ “ಡಾನಾ” ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.(Cyclone “Dana” will hit the coastal areas of the Bay of Bengal on Thursday, October 24, the Meteorological Department said).

ಪೂರ್ವ ಮಧ್ಯ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಉತ್ತರಕ್ಕೆ ವಾಯುಭಾರ ಕುಸಿತವುಂಟಾಗಿದೆ. ಇದು ಪಶ್ಚಿಮ ವಾಯುವ್ಯ ದಿಕ್ಕಿನೆಡೆಗೆ ವೇಗ ಪಡೆದುಕೊಂಡು ಬುಧವಾರ ಅಕ್ಟೋಬರ್ 23 ರ ವೇಳೆಗೆ ಅದು ಚಂಡ ಮಾರುತವಾಗಿ ಪರಿವರ್ತನೆಯಾಗಲಿದೆ. ಈ ಚಂಡ ಮಾರುತ ಇನ್ನೂ ವೇಗ ಪಡೆದುಕೊಳ್ಳುತ್ತ ಉತ್ತರ ಬಂಗಾಳಕೊಲ್ಲಿಯ ತೀರ ಪ್ರದೇಶಕ್ಕೆ ಅಕ್ಟೋಬರ್ 24 ರಂದು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ನಂತರ ವಾಯುವ್ಯ ದಿಕ್ಕಿನೆಡೆಗೆ ಚಲಿಸಲಿರುವ ಈ ಚಂಡಮಾರುತ ಗುರುವಾರ ರಾತ್ರಿ ವೇಳೆಗೆ ಅಥವಾ ಶುಕ್ರವಾರ ಬೆಳಿಗ್ಗೆ ಓಡಿಶಾ ಪುರಿಗೆ ಅಪ್ಪಳಿಸಲಿದೆ. ಈ ಸಂದರ್ಭದಲ್ಲಿ ಬೀಸುವ ಗಾಳಿಯ ವೇಗ 100 ರಿಂದ 120 ಕಿಮಿ ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರರು  ಮಂಗಳವಾರ ಸಂಜೆಯ ಒಳದೆ ದಡಕ್ಕೆ ಸುರಕ್ಷಿತ ಸ್ಥಳಗಳಿಗೆ ಬಂದು ಸೇರುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.