ಗೋವನಕೊಪ್ಪ ಪಕ್ಕದ ಮಲಪ್ರಭಾ ನದಿಯ ಹಳೆ ಸೇತುವೆ ಸಂಚಾರ ಸ್ಥಗಿತ. ರೈತರ ಜಮಿನುಗಳಿಗೆ ಮತ್ತೆ ನೀರು. ಚೇತರಿಸಿಕೊಂಡ ಪೇರಲ ಸೇರಿದಂತೆ ತೋಟಗಾರಿಕೆ ಬೆಳೆಗಳು ಮತ್ತೆ ಜಲಾವೃತ.
ಕುಳಗೇರಿ ಕ್ರಾಸ್: (ಬಾಗಲಕೋಟೆ) ನವಿತೀರ್ಥ ಜಲಾಶಯದಿಂದ ಮತ್ತೆ ಮಲಪ್ರಭಾ ನದಿಗೆ ನೀರನ್ನು ಬಿಡಲಾಗಿದೆ. ಎರೆಡು ದಿನಗಳ ಹಿಂದೆ 2ರಿಂದ 8ಸಾವಿರ ಕ್ಯೊಸೆಕ್ ನೀರನ್ನು ಹರಿಸಲಾಗಿತ್ತು. ಸದ್ಯ 10ರಿಂದ 15 ಸಾವಿರ ಕ್ಯೊಸೆಕ್ಗೆ ಏರಿಕೆಯಾಗಿದ್ದು ಪ್ರವಾಹದ ನೀರು ನದಿ ಪಾತ್ರದ ಗ್ರಾಮಗಳಿಗೆ ತಟ್ಟಲಿದೆ.
ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದು ಸತತ ಮಳೆಗೆ ನವಿಲುತಿರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಆಣೆಕಟ್ಟಿನ ಪೂರ್ಣಮಟ್ಟ 2079.50 ಅಡಿಗಳಿಗೆ ವಿರುದ್ದವಾಗಿ 2078.10 ಅಡಿಗಳಿಗೆ ತಲುಪಿದೆ. ಪ್ರಸ್ತುತ ಒಳಹರಿವು 10,000 ಸಾವಿರ ಕ್ಯೊಸೆಕ್ ಇದ್ದು ಮುಂಜಾಗೃತಾ ಕ್ರಮವಾಗಿ 15,000 ಸಾವಿರ ಕ್ಯೊಸೆಕ್ ನದಿ ಮೂಲಕ ಹೊರ ಬಿಡಲಾಗಿದೆ. ಮಲಪ್ರಭಾ ಆಣೆಕಟ್ಟಿನ ಕೆಳಭಾಗದಲ್ಲಿನ ಗ್ರಾಮಗಳಿಗೆ ಜಲಾಶಯದ ಅಭಿಯಂತರ ವಿವೇಕ ಮುದಿಗೌಡ್ರ ಎಚ್ಚರಿಕೆ ನೀಡಿದ್ದು ಮುಂಜಾಗೃತ ವಹಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರಿಗೆ ವಿನಂತಿಸಿದ್ದಾರೆ.
ಮಲಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಗಳಿಗೆ ಮತ್ತೆ ಪ್ರವಾಹದ ಬೀತಿ ಶುರುವಾಗಿದೆ. ಕಳೆದ ತಿಂಗಳಿಂದ ಪ್ರವಾಹದ ನೀರು ಬಂದು ರೈತರ ಬೆಳೆಗಳು ನಾಶವಾಗಿದ್ದವು. ಸದ್ಯ ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದ ರೈತರು ಮತ್ತೆ ಪ್ರವಾಹದ ಬೀತಿ ಎದುರಿಸುವಂತಾಗಿದೆ. ಚೇತರಿಸಿಕೊಂಡ ಪೇರಲ ಸೇರಿದಂತೆ ತೋಟಗಾರಿಕೆ ಬೆಳೆಗಳು ಮತ್ತೆ ಜಲಾವೃತಗೊಂಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸೇತುವೆ ಜಲಾವೃತ: ಹುಬ್ಬಳ್ಳಿ-ಸೊಲ್ಲಾಪೂರ ಸಂಪರ್ಕ ಕಲ್ಪಿಸುವ ಮಲಪ್ರಭಾ ನದಿಯ ಹಳೆ ಸೇತುವೆ ಮೇಲೆ ಹೆಚ್ಚಿನ ಪ್ರಮಾಣ ನೀರು ಹರಿಯುತ್ತಿದೆ. ನದಿ ಪಾತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಲವು ಸೇತುವೆಗಳು ಈಗಾಗಲೇ ಜಲಾವೃತಗೊಂಡಿವೆ. ಸಂಪರ್ಕ ರಸ್ತೆ ಕಡಿತಗೊಂಡಿದ್ದರಿಂದ ಹಲವು ಗ್ರಾಮದ ಜನರಿಗೆ ಸುತ್ತುವರೆದು ನದಿ ದಾಟುವ ಪರಿಸ್ಥಿತಿ ಎದುರಾಗಿದೆ.