ಸುದ್ದಿ ಕನ್ನಡ ವಾರ್ತೆ
ನವದೆಹಲಿ: ಭಾರತೀಯ ಜನತಾ ಪಾರ್ಟಿಯ ಸಾಂಘಿಕ ನಾಯಕತ್ವದಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರನ್ನು ಸರ್ವಾನುಮತದ ನಿರ್ಣಯದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅವರ ಪರವಾಗಿ 37 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿವೆ ಮತ್ತು ಆ ಸ್ಥಾನಕ್ಕೆ ಬೇರೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ ಎಂದು ಪಕ್ಷ ದೃಢಪಡಿಸಿದೆ.
ಆರೋಗ್ಯ ಸಚಿವ ಜೆ ಪಿ ನಡ್ಡಾ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ನಬಿನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಕೆ ಲಕ್ಷ್ಮಣ ಅವರಿಗೆ ಸಲ್ಲಿಸಿದರು, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಹಿರಿಯ ನಾಯಕರಾದ ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್ ಮತ್ತು ಕಿರಣ್ ರಿಜಿಜು ಹಾಜರಿದ್ದರು. ನಂತರ, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರು ಇತರ ರಾಜ್ಯ ನಾಯಕರೊಂದಿಗೆ ನಬಿನ್ ಅವರನ್ನು ಬೆಂಬಲಿಸುವ ಮತ್ತೊಂದು ಸೆಟ್ ನಾಮಪತ್ರಗಳನ್ನು ಸಲ್ಲಿಸಿದರು. ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ಪುಷ್ಕರ್ ಸಿಂಗ್ ಧಾಮಿ, ನಯಾಬ್ ಸಿಂಗ್ ಸೈನಿ ಮತ್ತು ಪ್ರಮೋದ್ ಸಾವಂತ್ ಕೂಡ ಭಾಗವಹಿಸಿದ್ದರು. ಬಿಹಾರ, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಸ್ಸಾಂ ಮತ್ತು ಜಾರ್ಖಂಡ್ ಸೇರಿದಂತೆ ಇತರ ರಾಜ್ಯಗಳ ನಾಯಕರು ನಬಿನ್ ಅವರನ್ನು ಬೆಂಬಲಿಸಿ ನಾಮಪತ್ರ ಸಲ್ಲಿಸಿದರು.
ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಸಿಕ್ಕಿಂ ಹಾಗೂ ಛತ್ತೀಸ್‌ಗಢದ ಪಕ್ಷದ ಉಸ್ತುವಾರಿಯಾಗಿ ಸಂಘಟನೆಯಲ್ಲಿ ತಮ್ಮ ಚಾಕಚಕ್ಯತೆ ಮೆರೆದಿದ್ದಾರೆ.
ನಿತಿನ್ ನಬಿನ್ ಅವರ ಹೆಗಲ ಮೇಲೆ ಈಗ ದೊಡ್ಡ ಜವಾಬ್ದಾರಿಗಳಿವೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಇದೆ.
ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮಹಿಳಾ ಮೀಸಲಾತಿಯಂತಹ ಮಹತ್ವದ ಬದಲಾವಣೆಗಳ ನಡುವೆ 2029ರ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ.
ಈ ತಿಂಗಳ ಅಂತ್ಯದ ವೇಳೆಗೆ ಅಧಿಕೃತವಾಗಿ ಅಧಿಕಾರ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಿತಿನ್ ನಬಿನ್ ಸಾರಥ್ಯದಲ್ಲಿ ಬಿಜೆಪಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.
