ಪಣಜಿ: ಮಹದಾಯಿ ಪ್ರವಾಹ ಪ್ರಾಧಿಕಾರದ ಎರಡನೇಯ ಸಭೆಯ ನಡಾವಳಿಕೆಗಳು ಗೋವಾ ರಾಜ್ಯ ಸರ್ಕಾರವನ್ನು ಬಯಲಿಗೆಳೆದಿದೆ ಎಂದು ಗೋವಾ ಫೊರ್‍ವರ್ಡ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ವಿಜಯ್ ಸರ್ದೇಸಾಯಿ ಟೀಕಿಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಗೋವಾ ರಾಜ್ಯ ಸರ್ಕಾರ ಮಹದಾಯಿ ನದಿ ನೀರು ವಿಷಯದಲ್ಲಿ ಗಂಭೀರವಾಗಿಲ್ಲ. ಮಹದಾಯಿ ನಮ್ಮ ಜೀವನಾಡಿಯಾಗಿದ್ದು ಕರ್ನಾಟಕವು ಮಹದಾಯಿ ನದಿ ನೀರನ್ನು ತನ್ನತ್ತ ಹರಿಸಿಕೊಳ್ಳುವುದನ್ನು ಮುಂದುವರೆಸಿದ್ದರೂ ಗೋವಾ ಸರ್ಕಾರವು ನ್ಯಾಯಾಲಯದಲ್ಲಿ ತುರ್ತು ವಿಚಾರಣೆಯನ್ನು ಕೋರುತ್ತಿಲ್ಲ. ಗೋವಾ ಸರ್ಕಾರವು ಮಹದಾಯಿ ಪ್ರಾಧಿಕಾರಕ್ಕೆ 1 ಕೋಟಿ 76 ಲಕ್ಷ ರೂಗಳನ್ನು ಪಾವತಿಸಬೇಕಿದೆ ಎಂದು ಶಾಸಕ ವಿಜಯ್ ಸರ್ದೇಸಾಯಿ ನುಡಿದರು.
ಗೋವಾದಲ್ಲಿ ಸಚಿವ ಸಂಪುಟ ಪುನರ್ರಚನೆಯ ಕುರಿತು ಮಾತನಾಡಿದ ಅವರು- ಸಂಪುಟ ಪುನರ್ರಚನೆಯ ಸಮಸ್ಯೆ ಬಗೆಹರಿಯುವುದಿಲ್ಲ. ನಿಜವಾಗಿಯೂ ವಜಾಗೊಳಿಸಲು ಅರ್ಹರಾದ ಅನೇಕ ಸಚಿವರು ಇದ್ದಾರೆ. ಪ್ರಸಕ್ತ ವಿಧಾನಸಭೆ ಅಧಿವೇಶನದಲ್ಲಿ ಈ ಸಚಿವರನ್ನು ಬಯಲಿಗೆಳೆದಿದ್ದೇವೆ. ಪ್ರತಿಯೊಬ್ಬರೂ ತಮ್ಮ ತಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿಗಳೇ ಆಗಿದ್ದಾರೆ. ರಾಜ್ಯದಲ್ಲಿ ಗುಡ್ಡ ಕಟಾವು ಮಾಡಿದರೆ ಆಯಾ ಭಾಗದ ಶಾನಭೋಗರೇ ಹೊಣೆಯಾಗಲಿದ್ದಾರೆ ಎಂಬ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿಕೆಗೆ ಉತ್ತರಿಸಿದ ಶಾಸಕ ವಿಜಯ್ ಸರ್ದೇಸಾಯಿ- ಇದು ಮುಖ್ಯಮಂತ್ರಿಗಳಿಗೆ ಮೊದಲೇ ಗೊತ್ತಾಗಬೇಕಿತ್ತು ಎಂದರು.
ಮಹದಾಯಿ ಪ್ರವಾಹ ಪ್ರಾಧಿಕಾರದ ಎರಡನೇಯ ಸಭೆಯ ನಡಾವಳಿಕೆಗಳು ಗೋವಾ ರಾಜ್ಯ ಸರ್ಕಾರವನ್ನು ಬಯಲಿಗೆಳೆದಿದೆ
