ಪಣಜಿ: ಗೋವಾದ ವೆರ್ಣಾದ ಸಿಪ್ಲಾ ಲಿಮಿಟೆಡ್ ಕಂಪನಿಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ವಿಠ್ಠಲ್ ಪಾಟೀಲ್ ಹಾಗೂ ಅಕ್ಷಯ ಭೀಮರಾವ್ ಪವಾರ್ ರವರ ವಾರಸುದಾರರಿಗೆ ಕಾರ್ಮಿಕ ಆಯುಕ್ತರು ಪರಿಹಾರವನ್ನು ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಕಾರ್ಮಿಕ ಆಯುಕ್ತ ಡಾ.ಲೆವಿನ್ಸನ್ ಮಾರ್ಟೀನ್ಸ ರವರು ಪಾಟೀಲ್ ರವರ ತಂದೆ ವಿಠ್ಠಲ ಪಾಟೀಲ್ ರವರಿಗೆ 16,16,600 ರೂ ಹಾಗೂ ಪವಾರ್ ರವರ ತಂದೆ ಭೀಮರಾವ್ ಪವಾರ್ ರವರಿಗೆ 16,49,625 ರೂಗಳನ್ನು ನೀಡಿ ಆದೇಶಿಸಿದ್ದಾರೆ. ಸದರಿ ಕಂಪನಿಯು ಕಾರ್ಮಿಕ ಆಯುಕ್ತರ ಬಳಿ ಈ ರಖಂ ಧನಾದೇಶ ರೂಪದಲ್ಲಿ ಜಮಾ ಮಾಡಿತ್ತು.
ಮೃತ ಇಬ್ಬರೂ ಕಾರ್ಮಿಕರ ಅಂತ್ಯ ಸಂಸ್ಕಾರದ ಖರ್ಚು ತಲಾ 5000 ರೂ ನೀಡುವಂತೆ ಕಾರ್ಮಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಗೋವಾದ ವೆರ್ಣಾದಲ್ಲಿರುವ ಸಿಪ್ಲಾ ಕಂಪನಿಯಲ್ಲಿ ಜುಲೈ 25 ರಂದು ದುರ್ಘಟನೆ ಸಂಭವಿಸಿತ್ತು. ಈ ಮಾಹಿತಿ ಕಾರ್ಮಿಕ ಆಯುಕ್ತರಿಗೆ ಲಭಿಸುತ್ತಿದ್ದಂತೆಯೇ ಸಂಬಂಧಿತ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಸಿಪ್ಲಾ ಕಂಪನಿಗೆ ಆದೇಶ ಹೊರಡಿಸಿದ್ದರು.
ನಂತರ ಪರಿಹಾರ ನೀಡಲು ಒಪ್ಪಕೊಂಡಿದ್ದ ಸಿಪ್ಲಾ ಕಂಪನಿಯು ಈ ರಖಂನ್ನು ಕಾರ್ಮಿಕ ಆಯುಕ್ತರ ಬಳಿ ಜಮಾ ಮಾಡಿತ್ತು. ಇದೀಗ ಈ ಪರಿಹಾರದ ಹಣ ಅವಘಡದಲ್ಲಿ ಮೃತಪಟ್ಟ ಕಾರ್ಮಿಕರ ವಾರಸುದಾರರಿಗೆ ಲಭಿಸಿದಂತಾಗಿದೆ.