ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಕಮರ್ಶಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಇಲ್ಲದ ಕಾರಣ ಹಲವು ಹೋಟೆಲ್ ಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಗೋವಾದಲ್ಲಿ ಕಮರ್ಶಿಯಲ್ ಸಿಲಿಂಡರ್ ಗಳು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವುದರಿಂದ ಗೋವಾದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯುಂಟಾಗುವಂತಾಗಿದೆ.
ಈ ಕುರಿತಂತೆ ಗೋವಾದ ಕಲಂಗುಟ್ ಮಾಜಿ ಶಾಸಕ ಆಗ್ನೆಲೊ ಫರ್ನಾಂಡಿಸ್ ಪ್ರತಿಕ್ರಿಯೆ ನೀಡಿ- ಗೋವಾದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಗೆ ಕಾಳಸಂತೆಯೇ ಕಾರಣ ಎಂದು ಆರೋಪಿಸಿದ್ದಾರೆ. ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಗ್ಯಾಸ್ ಸಿಲಿಂಡರ್ ಮಾರಾಟಮಾಡಲಾಗುತ್ತಿದೆ. ಇದರಿಂದಾಗಿ ಕೃತಕ ಅಭಾವ ಸೃಷ್ಠಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಗೋವಾದಲ್ಲಿ ಕಮರ್ಶಿಯಲ್ ಸಿಲಿಂಡರ್ ನ್ನು ಕಾಳಸಂತೆಯಲ್ಲಿ 7000 ರೂಗಳವರೆಗೆ ಮಾರಾಟ ಮಾಡಲಾಗುತ್ತಿದ್ದು , ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಸಿಲಿಂಡರ್ ಲಭಿಸದ ಕಾರಣ ಹಲವು ಹೋಟೆಲ್ ಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಸಿಲಿಂಡರ್ ಪೂರೈಕೆ ಶೀಘ್ರವೇ ಸುಧಾರಿಸದಿದ್ದರೆ ಗೋವಾದಲ್ಲಿ ಹಲವು ದೊಡ್ಡ ದೊಡ್ಡ ಹೋಟೆಲ್ ಗಳು ಕೂಡ ಬಂದ್ ಆಗುವ ಆತಂಕವನ್ನು ಹಲವು ಜನ ಹೋಟೆಲ್ ಮಾಲೀಕರು ವ್ಯಕ್ತಪಡಿಸಿದ್ದಾರೆ.
ಸದ್ಯ ಕಮರ್ಶಿಯಲ್ ಸಿಲಿಂಡರ್ ಕೊರತೆಯಿಂದಾಗಿ ಹಲವು ಹೋಟೆಲ್ ಗಳ ಮೆನುಗಳಲ್ಲಿ ವಿಶೇಷ ತಿಂಡಿಗಳನ್ನು ಕೈಬಿಡಲಾಗಿದೆ. ಹೆಚ್ಚಿನ ಗ್ಯಾಸ್ ಬಳಕೆಯಾಗುವಂತಹ ಹಲವು ಖಾದ್ಯಗಳು ಲಭಿಸದ ಕಾರಣ ಗ್ರಾಹಕರು ಕೂಡ ಬೇಸರ ಪಡುವಂತಾಗಿದೆ.
ಗೋವಾದಲ್ಲಿ ಗೃಹ ಬಳಕೆಯ ಸಿಲಿಂಡರ್ ಕೂಡ ಕೊರತೆಯುಂಟಾಗಿದ್ದು, ಗ್ಯಾಸ್ ಏಜನ್ಸಿಗಳ ಮುಂದೆ ಗ್ರಾಹಕರು ಸಿಲಿಂಡರ್ ಗಾಗಿ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯ ಕಂಡುಬರುತ್ತಿದೆ.
