ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಾವಿನ ಹಣ್ಣಿನ ರಾಜ ಎಂದೇ ಪ್ರಸಿದ್ಧಿ ಪಡೆದಿರುವ ಮಾನಕುರಾದ್ ಮಾವಿನ ಹಣ್ಣು ಗೋವಾದ ಮಾರುಕಟ್ಟೆಗೆ ಬಂದಿದೆ. ಆದರೆ ಒಂದು ಮಾವಿನ ಹಣ್ಣನ್ನು 600 ರೂಗಳಿಗೆ ಹಾಗೂ ಒಂದು ಡಜನ್ ಗೆ 7200 ರೂ ಗಳಂತೆ ಮಾರಾಟ ಮಾಡಲಾಗುತ್ತಿದೆ.

ಗೋವಾದ ಮಾನಕುರಾದ್ ಮಾವಿನ ಹಣ್ಣು ಸಕ್ಕರೆಯಷ್ಟೇ ಸಿಹಿಯಾಗಿರುವುದರಿಂದ ಇದನ್ನು ಗೋವಾದ ಮಾವಿನ ಹಣ್ಣಿನ ರಾಜಾ ಎಂದೇ ಕರೆಯಲಾಗುತ್ತದೆ. ಈ ಮಾವಿನ ಹಣ್ಣು ಪ್ರತಿ ವರ್ಷ ಮೊದಲು ಮಾರುಕಟ್ಟೆಗೆ ಬಂದಾಗ ಸರಾಸರಿ ಡಜನ್ ಗೆ 5 ರಿಂದ 7 ಸಾವಿರ ರೂ ಗಳವರೆಗೆ ದರ ಇರುವುದು ಸರ್ವೇಸಾಮಾನ್ಯ. ಬೇರೆ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಆವಕ ಹೆಚ್ಚಾದಂತೆಯೇ ಹಾಗೂ ಮಾನಕುರಾದ್ ಮಾವಿನ ಹಣ್ಣಿನ ಆವಕದಲ್ಲಿಯೂ ಹೆಚ್ಚಳವಾದಂತೆಯೇ ಈ ಮಾವಿನ ಹಣ್ಣಿನ ದರದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಅತ್ಯಂತ ಕಡಿಮೆ ಎಂದರೆ 2500 ರೂಗಳಿಂದ 3000 ರೂಗಳ ವರೆಗೆ ಬಂದು ನಿಲ್ಲುತ್ತದೆ.

ಗೋವಾದಲ್ಲಿ ಮಾನಕುರಾದ್ ಮಾವಿನ ಹಣ್ಣಿನ ಆರಂಭಿಕ ದರ ಇಷ್ಟೊಂದು ಹೆಚ್ಚಿದ್ದರೂ ಕೂಡ ಈ ಮಾವಿನ ಹಣ್ಣು ಖರೀದಿಸುವವರಿಗೇನೂ ಕೊರತೆಯಿಲ್ಲ. ಮಾನಕುರಾದ್ ಮಾರುಕಟ್ಟೆಗೆ ಆವಕವಾಗುತ್ತಿದ್ದಂತೆಯೇ ಗ್ರಾಹಕರು ಈ ಹಣ್ಣು ಖರೀದಿಗೆ ಮುಗಿಬೀಳುವುತ್ತಿರುವುದು ಸರ್ವೇಸಾಮಾನ್ಯವಾಗಿದೆ.