ಸುದ್ಧಿಕನ್ನಡ ವಾರ್ತೆ
ಪಣಜಿ: ಹಿಂದೂ ಸಂಸ್ಕøತಿಯಲ್ಲಿ ಪ್ರತಿಯೊಂದೂ ಪೂಜೆಗಳಲ್ಲಿ ಮಹತ್ವದ ಸ್ಥಾನ ಪಡೆದಿರುವಂತಹ ವೀಳ್ಯದೆಲೆಗೆ “ಅಚ್ಚೆ ದಿನ” ಬಂದಿದೆ. ಗೋವಾದಲ್ಲಿ ವೀಳ್ಯದೆಲೆ ದರ ಸದ್ಯ ದುಪ್ಪಟ್ಟು ಏರಿಕೆಯಾಗಿದೆ. ಗೋವಾದಲ್ಲಿ ಸದ್ಯ ಮಾರುಕಟ್ಟೆಯಲ್ಲಿ 160 ರೂ ಗಳಿಗೆ 100 ವೀಳ್ಯದೆಲೆ ನೀಡಲಾಗುತ್ತಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಇದು ಅತ್ಯಂತ ಹೆಚ್ಚಿನ ದರ ಎಂದೇ ಹೇಳಲಾಗುತ್ತಿದೆ.
ಕಳೆದ ತಿಂಗಳು ಗೋವಾದಲ್ಲಿ ವೀಳ್ಯದೆಲೆಯ ದರ 100 ಕ್ಕೆ 80 ರಿಂದ 100 ರೂ ಇತ್ತು ಎಂದು ವೀಳ್ಯದೆಲೆ ಮಾರಾಟಗಾರರು ಮಾಹಿತಿ ನೀಡಿದ್ದಾರೆ. ಸದ್ಯ ಹಳದಿಕುಂಕುಮ ಸಮಾರಂಭಕ್ಕೆ ಗೋವಾದಲ್ಲಿ ವೀಳ್ಯದೆಲೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದೂ ಸಂಪ್ರದಾಯದಲ್ಲಿ ವೀಳ್ಯದೆಲೆ ಇಲ್ಲದೆಯೇ ಯಾವುದೇ ಪೂಜಾ ಕಾರ್ಯ ಕೈಗೊಳ್ಳುವುದೇ ಇಲ್ಲ. ವೀಳ್ಯದೆಲೆಗೆ ಪ್ರಮುಖ ಸ್ಥಾನವಿದೆ. ಗೋವಾಕ್ಕೆ ಪ್ರಮುಖವಾಗಿ ಕರ್ನಾಟಕದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ವೀಳ್ಯದೆಲೆ ಪೂರೈಕೆಯಾಗುತ್ತದೆ. ಸದ್ಯ ಗೋವಾಕ್ಕೆ ಸಾಕಷ್ಟು ಪ್ರಮಾಣದಲ್ಲಿ ವೀಳ್ಯದೆಲೆ ಪೂರೈಕೆಯಾಗುತ್ತಿದ್ದರೂ ಕೂಡ ಗೋವಾದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಬೆಲೆ ಕೂಡ ಹೆಚ್ಚಾಗಿದೆ.
ಗೋವಾಕ್ಕೆ ಪ್ರಮುಖವಾಗಿ ಉತ್ತರಕನ್ನಡ ಜಿಲ್ಲೆ ಹಾಗೂ ಕರ್ನಾಟಕದ ನಿಪ್ಪಾಣಿ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ವೀಳ್ಯದೆಲೆ ಪೂರೈಕೆಯಾಗುತ್ತದೆ. ಅಂತೆಯೇ ಆಂಧ್ರಪ್ರದೇಶದಿಂದಲೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ವೀಳ್ಯದೆಲೆ ಪೂರೈಕೆಯಾಗುತ್ತದೆ. ಗೋವಾದಲ್ಲಿ ವೀಳ್ಯದೆಲೆ ಬೇಡಿಕೆ ಹೆಚ್ಚಾಗಿರುವುದು ದರ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದೇ ಹೇಳಲಾಗುತ್ತಿದೆ. ಒಟ್ಟಾರೆ ಸದ್ಯ ವೀಳ್ಯದೆಲೆಗೆ ಗೋವಾದಲ್ಲಿ ಅಚ್ಛೆ ದಿನ ಬಂದಿದೆ.
