ಸುದ್ಧಿಕನ್ನಡ ವಾರ್ತೆ
ಪಣಜಿ(ಮಾಪ್ಸಾ): ಉತ್ತರಗೋವಾದ ಪರ್ರಾ ಪರಿಸರದಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಉಂಟಾದ ಜಗಳ ವಿಕೋಪಕ್ಕೆ ತಲುಪಿದ ಘಟನೆ ನಡೆದಿದೆ. ಒಬ್ಬ ಯುವಕನ ಮೇಲೆ ನಾಲ್ಕು ಜನರ ಗುಂಪು ಚಾಕುವಿನಿಂದ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಲು ತೆರಳಿದ್ದ ಇನ್ನೊಬ್ಬ ಯುವಕನ ಮೇಲೂ ಹಲ್ಲೆ ನಡೆದಿದೆ. ಈ ಘಟನೆಯಿಂದಾಗಿ ಮಾಪ್ಸಾ ಪರ್ರಾ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ. ಮಂಗಳವಾರ ಬೆಳಿಗ್ಗೆ ಹಾಡುಹಗಲೇ ಇಂತಹ ಘಟನೆ ನಡೆದಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಲಭ್ಯವಾಗಿರುವ ಮಾಹಿತಿಯ ಅನುಸಾರ ಈ ಘಟನೆಯು “ಲವ್ ಟ್ರ್ಯಾಂಗಲ್” (ತ್ರಿಕೋನ ಪ್ರೇಮ ಪ್ರಕರಣ) ದಿಂದಾಗಿ ಉಂಟಾಗಿದೆ ಎಂದು ಪೋಲಿಸರಿಂದ ಮಾಹಿತಿ ಲಭ್ಯವಾಗಿದೆ. ಹಲ್ಲೆಗೊಳಗಾದ ಯುವಕ ಪರ್ರಾದಲ್ಲಿ ನಿಂತಿದ್ದ ಸಂದರ್ಭದಲ್ಲಿ ನಾಲ್ಕು ಜನರ ಯುವಕರ ಗುಂಪು ಏಕಾಏಕಿ ಧಾಳಿ ನಡೆಸಿದೆ. ಈ ಯುವಕನ ಮೇಲೆ ಚಾಕುವಿನ ಹಲ್ಲೆ ಎಷ್ಟು ಭೀಕರವಾಗಿತ್ತೆಂದರೆ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈತನನ್ನು ಕೊಲ್ಲುವುದೇ ಈ ಧಾಳಿಯ ಮುಖ್ಯ ಉದ್ದೇಶವಾಗಿತ್ತೇ…? ಎಂಬ ಪ್ರಶ್ನೆ ಕೂಡ ಎದುರಾಗಿದೆ.

ನಾಲ್ಕು ಜನ ಯುವಕರ ಒಬ್ಬ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಇನ್ನೊಬ್ಬ ಯುವಕ ಈ ಯುವಕನನ್ನು ತಪ್ಪಿಸಲು ಹೋದ ಎನ್ನಲಾಗಿದೆ. ಆದರೆ ಹಲ್ಲೆಕೋರರು ತಪ್ಪಿಸಲು ಹೋದ ವ್ಯಕ್ತಿಯ ಮೇಲೂ ಧಾಳಿ ನಡೆಸಿದ್ದಾರೆ. ಈತ ಕೂಡ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಘಟನೆಯ ಸಂದರ್ಭದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ಬರುತ್ತಿದ್ದಂತೆಯೇ ಹಲ್ಲೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಗಾಯಾಳು ಇಬ್ಬರು ಯುವಕರನ್ನು ಕೂಡಲೇ ಆಸ್ಫತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಪ್ರಮುಖವಾಗಿ ಧಾಳಿಗೊಳಗಾದ ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಂಬೋಲಿಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮಾಪ್ಸಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ಪಿಎಸ್ ಐ ಆದಿತ್ಯ ಗಾಡ ರವರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.