ಸುದ್ಧಿಕನ್ನಡ ವಾರ್ತೆ
ಪಣಜಿ(ಮಡಗಾಂವ): ಗೋವಾದ ಮಡಗಾಂವನ ರಾಯ್ ದಲ್ಲಿರುವ ಬೆಟ್ಟದಲ್ಲಿ ಬುಧವಾರ ರಾತ್ರಿ ಕಾಡ್ಗಿಚ್ಚು ಸಂಭವಿಸಿದೆ. ಈ ಬೆಂಕಿ ನಂದಿಸಲು ಮಡಗಾಂವ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದರೂ ಕೂಡ ಇದುವರೆಗೂ ಸಾಧ್ಯವಾಗಿಲ್ಲ. ಕಾಡ್ಗಿಚ್ಚು ಸಂಭವಿಸಿದ ಬೆಟ್ಟದಲ್ಲಿ ಘಟನಾ ಸ್ಥಳಕ್ಕೆ ತೆರಳಲು ದಾರಿಯಿಲ್ಲದ ಕಾರಣ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ ಎನ್ನಲಾಗಿದೆ.

ಕಾಡ್ನಿಚ್ಚು ನಂದಿಸಲು ನಾವು ಸತತ ಪ್ರಯತ್ನ ನಡೆಸುತ್ತಲೇ ಇದ್ದೇವೆ ಎಂದು ಮಡಗಾಂವ ಅಗ್ನಿಶಾಮಕ ದಳದ ಅಧಿಕಾರಿ ಗಿಲ್ ಸೋಜಾ ರವರು ಮಾಹಿತಿ ನೀಡಿದ್ದಾರೆ. ಬೆಟ್ಟದ ಮೇಲೆ ಯಾರೋ ಹುಲ್ಲಿಗೆ ಬೆಂಕಿ ಹಚ್ಚಿರುವುದರಿಂದ ಈ ಅಗ್ನಿ ಅವಗಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬುಧವಾರ ರಾತ್ರಿ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಮಡಗಾಂವ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಆಗಮಿಸಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಬೆಂಕಿ ನಂದಿಸಲು ಇದುವರೆಗೂ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಕಾಡ್ಗಿಚ್ಚು ಸಂಭವಿಸಿರುವುದರಿಂದ ಬೆಟ್ಟದಲ್ಲಿ ಗಿಡಮರಗಳು ಹಾಗೂ ಜೀವಜಂತುಗಳಿಗೆ ಹಾನಿಯಾಗುವ ಭೀತಿ ಕೂಡ ಎದುರಾಗಿದೆ. ಶುಕ್ರವಾರ ಬೆಳಿಗ್ಗೆ ಕೂಡ ಬೆಟ್ಟದ ಮೇಲೆ ಕಾಡ್ಗಿಚ್ಚಿನ ಹೊಗೆ ಕಾಣುತ್ತಿದ್ದು ಜನತೆ ಕಂಗಾಲಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂಧಿಗಳ ಕಾರ್ಯಾಚರಣೆ ಮುಂದುವರೆದಿದೆ.