ಸುದ್ಧಿಕನ್ನಡ ವಾರ್ತೆ
ಪಣಜಿ: ದೇವಸ್ಥಾನದ ಪೂಜೆಯ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾದ ತಹಶೀಲ್ದಾರರ ಮಧ್ಯ ಪ್ರವೇಶದ ನಂತರವೂ ಶಮನಗೊಳ್ಳದ ಹಿನ್ನೆಲೆಯಲ್ಲಿ ಇದೀಗ ಸರ್ಕಾರದ ವತಿಯಿಂದ ದೇವಸ್ಥಾನಕ್ಕೆ ಪುರೋಹಿತರನ್ನು ನೇಮಕ ಮಾಡಿ ಪೂಜೆ ನೆರವೇರಿಸುವ ನಿರ್ಣಯವನ್ನು ಸರ್ಕಾರದ ವತಿಯಿಂದ ತೆಗೆದುಕೊಳ್ಳಲಾಗಿದೆ ಎಂದು ತಹಶೀಲ್ದಾರ ಗುರುಪ್ರಸಾದ ತೋರಸ್ಕರ್ ಮಾಹಿತಿ ನೀಡಿದ್ದಾರೆ.
ಓಲ್ಡಗೋವಾ ಸಮೀಪದ ಧುಳಾಪಿ-ಖೊರ್ಲಿಯಲ್ಲಿರುವ ಸಾತೇರಿ-ರವಳನಾಥ ದೇವಸ್ಥಾನದ ಪೂಜೆ ವಿಷಯಕ್ಕೆ ಸಂಬಂಧಿಸಿದಂತೆ ವಾದ -ವಿವಾದ ಆರಂಭಗೊಂಡಿತ್ತು. ಈ ವಾದವನ್ನು ಶಮನಗೊಳಿಸಲು ದೇವಸ್ಥಾನಕ್ಕೆ ಸಂಬಂಧಿಸಿದ ಊರಿನ ಎರಡೂ ಗುಂಪಿನ ಜನರನ್ನು ಪಣಜಿಯ ತಹಶೀಲ್ದಾರ ಕಛೇರಿಗೆ ಕರೆಯಿಸಲಾಗಿತ್ತು. ಎರಡೂ ಗುಂಪಿನ ಜನರು ಅಲ್ಲಿ ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದರು. ಆದರೆ ಎರಡೂ ಗುಂಪಿನ ವಿಷಯ ಮಂಡನೆಯ ನಂತರ ಅಂತಿಮ ಪ್ರಸ್ತಾವಕ್ಕೆ ಮತ್ತೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆಗೆ ದೇವಸ್ಥಾನ ಪೂಜೆಗೆ ಸರ್ಕಾರದ ವತಿಯಿಂದಲೇ ಪುರೋಹಿತರನ್ನು ನೇಮಕ ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು ಎಂದು ತಹಶೀಲ್ದಾರ ಗುರುಪ್ರಸಾದ ತೋರಸ್ಕರ್ ಮಾಹಿತಿ ನೀಡಿದರು.
ರವಳನಾಥ ದೇವಸ್ಥಾನದ ಗೌರವ (ಮಾನ್) ಯಾರಿಗೆÉಂಬ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ಆರಂಭಗೊಂಡ ವಾದದ ನಂತರ ಊರಿನ ಎರಡೂ ಗುಂಪುಗಳಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹೇರಿ ದೇವಸ್ಥಾನಕ್ಕೆ ಬೀಗ ಹಾಕಲಾಗಿತ್ತು. ಆದರೆ ಇದರ ಚಾವಿಯನ್ನು ಎರಡೂ ಗುಂಪುಗಳಿಗೆ ನೀಡಬೇಕೆಂದು ತಹಶೀಲ್ದಾರರು ಸೂಚನೆ ನೀಡಿದ್ದರು. ಆದರೆ ದೇವಸ್ಥಾನದ ಕೊಂಕಣಿ ಗಾವಡೆ ಸಮಾಜದ ಜನರು ತಹಶೀಲ್ದಾರ ಕಛೇರಿಗೆ ತೆರಳಿದ್ದರು.
ದೇವಸ್ಥಾನದ ಊರಿನ ಜನರು ನೀಡಿರುವ ಮಾಹಿತಿಯ ಅನುಸಾರ- ನಮ್ಮ ದೇವಸ್ಥಾನಕ್ಕೆ ತಹಶೀಲ್ದಾರ ರವರು ಬೀಗ ಹಾಕಿಸಿ ನಮಗೆ ಈ ಯಾವುದೇ ಪೂರ್ವ ಸೂಚನೆ ನೀಡದೆಯೇ ನಮ್ಮೊಂದಿಗೆ ಚರ್ಚೆಯನ್ನೂ ಮಾಡದೆಯೇ ದೇವಸ್ಥಾನದ ಚಾವಿಯನ್ನು ತಹಶೀಲ್ದಾರ್ ರವರು ದೇವಸ್ಥಾನದ ಈ ಎರಡೂ ಗುಂಪಿಗೆ ನೀಡಿದ್ದರು. ತಹಶೀಲ್ದಾರ್ ರವರು ಸ್ಥಳೀಯ ಶಾಸಕರು ಹೇಳಿದಂತೆಯೇ ನಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
