ಸುದ್ಧಿಕನ್ನಡ ವಾರ್ತೆ
ಪಣಜಿ: ಬಾಲಿವುಡ್ ನಟ ಸಲ್ಮಾನ್ ಖಾನ್ ರವರಿಗೆ ಹೊಸ ವರ್ಷದ ಆರಂಭ ಗೋವಾದಲ್ಲಿ ಕಾಯ್ದೆಯ ಉಲ್ಲಂಘನೆಯ ಪೆಟ್ಟು ಬೀಳುವ ಸಾಧ್ಯತೆಯಿದೆ.

ಗೋವಾದ ನೆರೂಲ್ ನಲ್ಲಿರುವ ಅವರ ಆಸ್ತಿಯಲ್ಲಿ ಸಿಆರ್ ಜೆಡ್ ನಿಯಮದ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಲಂಗುಟ್ ಮತದಾರ ಸಂಘ ಮಂಚ್ ಸಂಘಟನೆಯು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠದ ಮೆಟ್ಟಿಲೇರಿದೆ. ಇದರಿಂದಾಗಿ 2017 ರಲ್ಲಿ ಸಲ್ಮಾನ ಖಾನ್ ರವರು ಖರೀದಿಸಿರುವ ಈ ಆಸ್ತಿಯ ಮೂಲಕ ಸಲ್ಮಾನ ಖಾನ್ ಇದೀಗ ದೊಡ್ಡ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಜನವರಿ ತಿಂಗಳಲ್ಲಿ ಈ ಪ್ರಕರಣದ ವಿಚಾರಣೆ ಆರಂಭಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಲ್ಮಾನ್ ಖಾನ್ ರವರು 2017 ರಲ್ಲಿ ಗೋವಾದ ನೆರುಲ್ ನದಿಯ ಪಕ್ಕದ ಸಿಕೇರಿಯಲ್ಲಿ ಆಸ್ತಿಯೊಂದನ್ನು ಖರೀದಿಸಿದ್ದರು. ಈ ಆಸ್ತಿಯು ನದಿಗೆ ಹೊಂದಿಕೊಂಡಿದ್ದು ಈ ಆಸ್ತಿಯ ಕೆಲ ಭಾಗ ಸಿಆರ್ ಜೆಡ್ ಕ್ಷೇತ್ರದಲ್ಲಿ ಬರುತ್ತದೆ. ಸಿಆರ್ ಜೆಡ್ ಕ್ಷೇತ್ರದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲಾಗುವುದಿಲ್ಲ. ಆದರೆ ಸಲ್ಮಾನ್ ಖಾನ್ ರವರಿಗೆ ಇಲ್ಲಿ ಕಟ್ಟಡ ನಿರ್ಮಿಸಲು ಪರವಾನಗಿ ಹೇಗೆ ಲಭಿಸಿದೆ…? ಎಂದು ಅರ್ಜಿದಾರರು ನಮೂದಿಸಿದ್ದಾರೆ.

ಈ ಪ್ರಕರಣವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ. ನ್ಯಾಯಾಲಯವು ಒಂದುವೇಳೆ ಈ ಪ್ರಕರಣದ ಸಮಗ್ರ ತನಿಖೆಗೆ ಆದೇಶ ನೀಡಿದರೆ 2017 ರಿಂದ ಇಲ್ಲಿಯ ವರೆಗಿನ ಎಲ್ಲ ವ್ಯವಹಾರಗಳ ಫೈಲ್ ಗಳು ಮತ್ತೆ ತೆರೆದುಕೊಳ್ಳಲಿದೆ. ಇದರಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಮಾತ್ರವಲ್ಲದೆಯೇ ಅಲ್ಲಿ ಕಟ್ಟಡ ನಿರ್ಮಿಸಲು ಪರವಾನಗಿ ನೀಡಿದ ಎಲ್ಲ ವಿಭಾಗದ ಅಧಿಕಾರಿಗಳು ಕೂಡ ತೊಂದರೆಗೆ ಸಿಲುಕಿಕೊಳ್ಳಲಿದ್ದಾರೆ.

ಗೋವಾದ ಬೀಚ್ ಪರಿಸರದಲ್ಲಿ ಹೆಚ್ಚುತ್ತಿರುವ ಅನಧೀಕೃತ ಕಟ್ಟಡಗಳ ವಿರುದ್ಧ ರಾಜ್ಯದ ಜನತೆ ಅಧಿಕ ಆಕ್ರಮಣಕಾರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ರವರಿಗೆ ಹೊಸ ವರ್ಷ ಹಲವು ಸಮಸ್ಯೆಗಳನ್ನು ತಂದೊಡ್ಡಲಿದೆಯೋ…? ಎಂಬುದು ಕಾದು ನೋಡಬೇಕಾಗಿದೆ.