ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾಕ್ಕೆ ಹೊಸ ವರ್ಷ ಸಂಭ್ರಮಾಚರಣೆಗೆ ಭಾರಿ ಸಂಖ್ಯೆಯಲ್ಲಿ ದೇಶವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈಗಾಗಲೇ ಗೋವಾಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದಾರೆ. ಗೋವಾಕ್ಕೆ ಆಗಮಿಸಲು ಹೆಚ್ಚಿನ ಪ್ರವಾಸಿಗರು ಈಗಾಗಲೇ ದುಪ್ಪಟ್ಟು ಟಿಕೇಟ್ ದರ ನೀಡಿ ಬಂದಿದ್ದಾರೆ. ಆದರೆ ಗೋವಾದಿಂದ ಇದೀಗ ತಮ್ಮ ರಾಜ್ಯಕ್ಕೆ ವಾಪಸ್ಸಾಗಬೇಕಾದರೆ 4 ಪಟ್ಟು ಹೆಚ್ಚಿನ ದರ ತೆರುವ ಅನಿವಾರ್ಯತೆ ಎದುರಾಗಿದೆ.
ಹೌದು… ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಜನರಿ 1 ಅಥವಾ 2 ರಂದು ತಮ್ಮ ತಮ್ಮ ರಾಜ್ಯಗಳಿಗೆ ವಾಪಸ್ಸಾಗುತ್ತಾರೆ. ಆದರೆ ಇದೀಗ ಗೋವಾದಿಂದ ವಿವಿರ್ಧ ರಾಜ್ಯಗಳಿಗೆ ವಾಪಸ್ಸಾಗಲು ಖಾಸಗಿ ಬಸ್ ಸ್ಲೀಪರ್ ಕೋಚ್ ದರ 900 ರೂ ದಿಂದ 5500 ರೂಗೆ ಹೆಚ್ಚಳವಾಗಿದೆ. ಇದರಿಂದಾಗಿ ಗೋವಾಕ್ಕೆ ಹೊಸ ವರ್ಷ ಸಂಭ್ರಮಾಚರಣೆಗೆ ಬಂದ ಪ್ರವಾಸಿಗರು ತಮ್ಮ ರಾಜ್ಯಕ್ಕೆ ವಾಪಸ್ಸಾಗಲು 4 ಪಟ್ಟು ಹಣ ತೆರುವುದು ಅನಿವಾರ್ಯವಾಗಲಿದೆ.
ಗೋವಾದಿಂದ ವಿವಿಧ ರಾಜ್ಯಗಳಿಗೆ ತೆರಳುವ ಸರ್ಕಾರಿ ಬಸ್ ಗಳೆಲ್ಲವೂ ಜನವರಿ ಮೊದಲ ವಾರದ ಟಿಕೇಟ್ ಮುಂಗಡವಾಗಿಯೇ ಬುಕ್ ಆಗಿರುವುದು ಕಂಡುಬರುತ್ತಿದೆ. ಗೋವಾ ದಿಂದ ಬೆಂಗಳೂರು ಹೈದರಾಬಾದ್ ತೆರಳಲು ಖಾಸಗಿ ಬಸ್ಸೊಂದರ ದರ 5500 ರೂ ಆಗಿದೆ. ಇದರಿಂದಾಗಿ ಗೋವಾಕ್ಕೆ ಬಂದ ಪ್ರವಾಸಿಗರು ತಮ್ಮ ರಾಜ್ಯಕ್ಕೆ ವಾಪಸ್ಸಾಗಲು ತೊಂದರೆ ಅನುಭವಿಸುವಂತಾಗಿದೆ.
ಖಾಸಗಿ ಬಸ್ ಕಂಪನಿಯ ಏಜಂಟ್ ಪ್ರತಿಕ್ರಿಯೆ ನೀಡಿ- ಪ್ರತಿ ವರ್ಷ ಹೊಸ ವರ್ಷದ ಮೊದಲ ನಾಲ್ಕು ದಿನ ಹಾಗೂ ಹೊಸ ವರ್ಷ ಆರಂಭಗೊಂಡ ನಂತರದ ನಾಲ್ಕುದಿನ ಗೋವಾದಿಂದ ವಿವಿಧ ರಾಜ್ಯಗಳಿಗೆ ತೆರಳುವ ಖಾಸಗಿ ಕಂಪನಿಯ ಬಸ್ ಟಿಕೇಟ್ ದರ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿಯೇ ಇರುತ್ತದೆ. ಬಸ್ ಗಳಲ್ಲಿ ಸ್ಲೀಪರ್ ಕೋಚ್ ಬೇಡಿಕೆಯೇ ಹೆಚ್ಚಾಗಿದೆ. ಇದರಿಂದಾಗಿ ಬೇಡಿಕೆ ಹೆಚ್ಚಾದಂತೆ ಬಸ್ ಟಿಕೇಟ್ ದರ ಕೂಡ ಹೆಚ್ಚಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.
ಗೋವಾದಲ್ಲಿ ಬಹುತೇಕ ಹೋಟೆಲ್ ರೂಂ ಗಳು ಮುಂಗಡವಾಗಿಯೇ ಬುಕ್ ಆಗಿದೆ. ಸದ್ಯ ಗೋವಾದಲ್ಲಿ ಯಾವುದೇ ಹೋಟೆಲ್ ರೂಂ ಗಳು ಲಭಿಸುವುದು ಕಷ್ಟ ಎಂಬಂತಾಗಿದೆ. ಗೋವಾಕ್ಕೆ ಹೆಚ್ಚಿನ ಪ್ರವಾಸಿಗರು ತಮ್ಮ ಸ್ವಂತ ವಾಹನದಲ್ಲಿಯೇ ಆಗಮಿಸುತ್ತಿರುವುದರಿಂದ ಗೋವಾದಲ್ಲಿ ಸದ್ಯ ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗಿದೆ. ಡಿಸೆಂಬರ್ 30 ಮತ್ತು 31 ರಂದು ಗೋವಾದಲ್ಲಿ ಇನ್ನಷ್ಟು ಪ್ರವಾಸಿಗರು ಆಗಮಿಸಲಿರುವುದರಿಂದ ಎಲ್ಲ ರಸ್ತೆಗಳಲ್ಲಿ ಸಂಜೆಯ ವೇಳೆಗೆ ಭಾರಿ ಟ್ರಾಫಿಕ್ ಸಮಸ್ಯೆಯ ಆತಂಕ ಎದುರಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಡಿಸೆಂಬರ್ 31 ರಂದು ಗೋವಾದ ಕಲಂಗುಟ್ ಬೀಚ್ ರಸ್ತೆಯಲ್ಲಿ ದಾಖಲೆಯ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ರಾತ್ರಿಯಿಡೀ ಈ ರಸ್ತೆಯಲ್ಲಿ ವಾಹನಗಳು ಸ್ಟ್ರಕ್ ಆಗಿಯೇ ಉಳಿದಿದ್ದವು.
