ಸುದ್ಧಿಕನ್ನಡ ವಾರ್ತೆ
ಪಣಜಿ: ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ರವರು ಶನಿವಾರ ಸಂಜೆ ಗೋವಾದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಗೋವಾ ರಾಜ್ಯಪಾಲರಾದ ಪಶುಪತಿ ಅಶೋಕ ಗಜಪತಿ ರಾಜು ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ರಾಷ್ಟ್ರಪತಿಗಳನ್ನು ಸ್ವಾಗತ ಕೋರಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯಕ್ ಉಪಸ್ಥಿತರಿದ್ದರು.
ಡಿಸೆಂಬರ್ 27 ರಂದು ರಾಷ್ಟ್ರಪತಿಗಳು ಸಂಜೆ ಗೋವಾದ ದಾಬೋಲಿಂ ವಿಮಾನ ನಿಲ್ದಾಣದಿಂದ ಪಣಜಿ ಸಮೀಪದ ದೌನಾಪಾವುಲಾ ದಲ್ಲಿರುವ ಗೋವಾ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಭಾನುವಾರ ಬೆಳಿಗ್ಗೆ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು ಅಲ್ಲಿಂದ ಕಾರವಾರದ ನೇವೆಲ್ ಬೇಸ್ ಗೆ ಪ್ರಯಾಣ ಬೆಳೆಸಲಿದ್ದಾರೆ.
ರಾಷ್ಟ್ರಪತಿಗಳ ಓಡಾಟದ ಸಂದರ್ಭದಲ್ಲಿ ಗೋವಾ ದಾಬೋಲಿಂ ವಿಮಾನ ನಿಲ್ದಾಣದಿಂದ ಚಿಕಲಿಮ್,ಕೊರ್ಟಾಲಿಂ, ಹೊಸ ಜುವಾರಿ ಸೇತುವೆ, ಬಾಂಬೋಲಿಂ-ದೋನಾಪಾವುಲಾ, ವರೆಗಿನ ರಸ್ತೆಯಲ್ಲಿ ಅಂಬುಲೆನ್ಸ ಮತ್ತು ಇತರ ತುರ್ತು ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕ ಓಡಾಟಕ್ಕೆ ನಿಬರ್ಂಧ ಹೇರಲಾಗಿತ್ತು. ಡಿಸೆಂಬರ್ 27 ರಂದು ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಹಾಗೂ ಡಿಸೆಂಬರ್ 28 ರಂದು ಬೆಳಿಗ್ಗೆ 7.30 ರಿಂದ 9.30 ರವರೆಗೆ ಸಾರ್ವಜನಿಕ ವಾಹನಗಳ ಓಡಾಟಕ್ಕೆ ನಿಬರ್ಂಧ ಹೇರಲಾಗಿದೆ.
