ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ): ಗೋವಾದ ಕಾಣಕೋಣ ಸಮುದ್ರ ತೀರದಲ್ಲಿ ಭೀಕರ ಘಟನೆ ನಡೆದಿದೆ ಎಂಬ ಅಂಶ ಎಲ್ಲರಲ್ಲೂ ಆತಂಕ ಮೂಡಿಸಿದೆ. ಗೋವಾದ ಕಾಣಕೋಣ ತಾಲೂಕಿನ ತಳಪಣ ಸಮುದ್ರ ತೀರದಿಂದ ಸೋಮವಾರ ಸಮುದ್ರಕ್ಕೆ ತೆರಳಿದ್ದ ಮೀನುಗಾರಿಕಾ ಬೋಟ್ ನಾಪತ್ತೆಯಾಗಿದೆ. (Fishing boat goes missing) ಲಭ್ಯವಾಗಿರುವ ಮಾಹಿತಿಯ ಅನುಸಾರ ಈ ಬೋಟ್ ನಲ್ಲಿ (There were 4 fishermen) 4 ಜನ ಮೀನುಗಾರರಿದ್ದರು. ಡಿಸೆಂಬರ್ 15 ರಂದು ಇವರು ಬೋಟ್ ನಲ್ಲಿ ಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಆದರೆ ಇದುವರೆಗೂ ಅವರು ವಾಪಸ್ಸಾಗಿಲ್ಲ, ಯಾವುದೇ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬದು ಆತಂಕದ ವಿಷಯವಾಗಿದೆ.

ಸೋಮವಾರ ಬೆಳಿಗ್ಗೆ ಗೋವಾದ ಕಾಣಕೋಣ ತಳಪಣ ಸಮುದ್ರ ತೀರದಿಂದ ಎಂದಿನಂತೆಯೇ ಈ ಬೋಟ್ ನಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಸಂಜೆಯ ವರೆಗೆ ಈ ಬೋಟ್ ವಾಪಸ್ಸಾಗುವ ನಿರೀಕ್ಷೆಯಿತ್ತು. ಆದರೆ ರಾತ್ರಿಯಾದರೂ ಬೋಟ್ ವಾಪಸ್ಸಾಗಲಿಲ್ಲ. ಆ ಬೋಟ್ ನಲ್ಲಿದ್ದ ಮೀನುಗಾರರನ್ನು ಸಂಪರ್ಕಿಸಲು ಕುಟುಂಬದವರು ಸತತ ಪ್ರಯತ್ನ ನಡೆಸುತ್ತಲೇ ಇದ್ದಾರೆ ಆದರೆ ಇದುವರೆಗೂ ಸಂಪರ್ಕ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಮೀನುಗಾರರು ನಾಪತ್ತೆಯಾಗಿರುವ ಕುರಿತಂತೆ ಮಾಹಿತಿ ಲಭ್ಯವಾದ ಕೂಡಲೆ ನೌಕಾದಳದ ಅಧಿಕಾರಿಗಳು ಹಾಗೂ ಸ್ಥಳೀಯ ಪೋಲಿಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ನಾಪತ್ತೆಯಾಗಿರುವ ಬೋಟ್ ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಹೆಲಿಕ್ಯಾಪ್ಟರ್ ಮೂಲಕ ಸಮುದ್ರದಲ್ಲಿ ಬೋಟ್ ಪತ್ತೆಗಾಗಿ ನೌಕಾದಳದ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ. ಸ್ಥಳೀಯ ಮೀನುಗಾರರು ಕೂಡ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಮುದ್ರದ ಅಲೆಗೆ ಬೇರೆಡೆ ತೇಲಿ ಹೋಗಿರುವ ಸಾಧ್ಯತೆಯಿದೆ ಎಂದು ಕೂಡ ಅಂದಾಜಿಸಲಾಗುತ್ತಿದೆ.

ನಾಪತ್ತೆಯಾಗಿರುವ ನಾಲ್ಕೂ ಮೀನುಗಾರರ ಕುಟುಂಬದಲ್ಲಿ ಆತಂಕ ಮನೆಮಾಡಿದೆ. ತಮ್ಮ ಕುಟುಂಬ ಸದಸ್ಯರು ಸುಖರೂಪವಾಗಿ ವಾಪಸ್ಸಾಗಲಿ ಎಂದು ದೇವರ ಮೊರೆಹೋಗಿದ್ದಾರೆ. ಈ ಬೋಟ್ ತಾಂತ್ರಿಕ ದೋಷದಿಂದಾಗಿ ಎಲ್ಲಿಯಾದರೂ ಹೋಗಿ ಸಿಲುಕಿಕೊಂಡಿದೆಯೇ ಅಥವಾ ಬೋಟ್ ಅಪಘಾತಕ್ಕೀಡಾಗಿದೆಯೇ..? ಎಂಬುದು ಇದುವರೆಗೂ ಸ್ಪಷ್ಠವಾಗಿಲ್ಲ.

ಕಾರವಾರ-ಗೋವಾ ಹೆದ್ದಾರಿ ತಡೆ…
ಸೋಮವಾರ ಮೀನುಗಾರಿಕೆಗೆ ತೆರಳಿದ ಮೀನುಗಾರರು ಒಂದು ದಿನ ಕಳೆದರೂ ವಾಪಸ್ಸಾಗದಿರುವುವ ಹಿನ್ನೆಲೆಯಲ್ಲಿ ಸ್ಥಳೀಯರು ಇವರ ಶೋಧ ಕಾರ್ಯ ನಡೆಸುತ್ತಿದ್ದರು. ರಕ್ಷಣಾ ಕಾರ್ಯಕ್ಕೆ ಎಷ್ಟೇ ಪ್ರಯತ್ನಿಸಿದರೂ ಯಾವುದೇ ಅಧಿಕಾರಿಗಳು ಬಾರದೇ ಇದ್ದುದಕ್ಕೆ ಬೇಸರಗೊಂಡ ಸ್ಥಳೀಯರು ಕಾರವಾರ-ಗೋವಾ ಹೆದ್ದಾರಿ ತಡೆ ಮಾಡಿದ್ದಾರೆ.