ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿನ ನೈಟ್ ಕ್ಲಬ್ ನಲ್ಲಿ ಭೀಕರ ಅಗ್ನಿ ಅವಗಡದಲ್ಲಿ 25 ಜನರು ಸಾವನ್ನಪ್ಪಲು ಗೋವಾ ಸರ್ಕಾರವೇ ನೇರ ಹೊಣೆಯಾಗಿದೆ. ಗೋವಾದಲ್ಲಿ ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರವು 13 ವರ್ಷಗಳಲ್ಲಿ ಬೃಷ್ಠಾಚಾರಕ್ಕೆ ಪ್ರಸಿದ್ಧಿಪಡೆದಿದೆ. ಈ ಸರ್ಕಾರದ ಅವಧಿಯಲ್ಲಿ ವ್ಯಾಪಕ ಬೃಷ್ಠಾಚಾರದಿಂದಾಗಿ (Corruption) ಸಾಮಾನ್ಯ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜರೀವಾಲ್ ಆರೋಪಿಸಿದ್ದಾರೆ. ಗೋವಾದಲ್ಲಿ ಜಿಲ್ಲಾ ಪಂಚಾಯತ ಚುನಾವಣೆಯ ಹಿನ್ನೆಲೆಯಲ್ಲಿ ಗೋವಾದ ವೆಲ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಪಂಜಾಬನಲ್ಲಿ ಯಾವುದೇ ಉದ್ಯೋಗಕ್ಕೆ ಪರವಾನಗಿ ನೀಡಲು ಏಕಗವಾಕ್ಷಿ (Single window) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ 45 ದಿನಗಳಲ್ಲಿ ಪರವಾನಗಿ ನೀಡದಿದ್ದರೆ ಸದನ್ನು ಅನುಮೋದಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ಗೋವಾದಲ್ಲಿ ಇಂತಹ ಯಾವುದೇ ವ್ಯವಸ್ಥೆಯಿಲ್ಲ ಎಂದು ಅರವಿಂದ ಕೇಜರಿವಾಲ್ ಹೇಳಿದರು.
ಗೋವಾ ರಾಜ್ಯ ಸರ್ಕಾರವು ಕೇವಲ ಶುಲ್ಕ ಸಂಗ್ರಹ ಸರ್ಕಾರ. (Fee Collection Govt) ಗೋವಾದಲ್ಲಿ ಶುಲ್ಕ ಮತ್ತು ಲಂಚ ತೆಗೆದುಕೊಳ್ಳದೆಯೇ ಯಾವುದೇ ಕೆಲಸ ನಡೆಯುವುದಿಲ್ಲ. ಇದಕ್ಕೆ ಒಂದು ಉದಾಹರಣೆ ಎಂದರೆ ಗೋವಾದ ಹಡಪಡೆಯಲ್ಲಿರುವ ನೈಟ್ ಕ್ಲಬ್. ನೈಟ್ ಕ್ಲಬ್ ಯಾವುದೇ ಪರವಾನಗಿ ಇಲ್ಲದೆಯೇ ನಡೆಯುತ್ತಿತ್ತು ಎಂದು ಅರವಿಂದ ಕೇಜರಿವಾಲ್ ಬಿಜೆಪಿ ವಿರುದ್ಧ ಆರೋಪದ ಸುರಿಮನಳೆಗೈದರು.
ಈ ಸಂದರ್ಭದಲ್ಲಿ ಎಎಪಿ ಗೋವಾ ಉಸ್ತುವಾರಿ ಅತಿಶಿ, ರಾಜ್ಯ ನಿಮಂತ್ರಕ ಅಮಿತ್ ಪಾಲಯೇಕರ್, ವೆಂಜಿ ವಿಯೆಗಾಸ್, ಮತ್ತಿತರರು ಉಪಸ್ಥಿತರಿದ್ದರು.
