ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಉತ್ತರ ಬದಿಯಿಂದ ಬೀಸುವ ಶೀತ ಗಾಳಿ (Cold wind blowing from north side) ಪ್ರಭಾವ ಹೆಚ್ಚಾಗಿದೆ. ಕಳೆದ ಸುಮಾರು ಮೂರು ದಿನಗಳಿಂದ ಗೋವಾ ರಾಜ್ಯಾದ್ಯಂತ ಚಳಿಯ ಪ್ರಮಾಣ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ತಾಪಮಾನದಲ್ಲಿ ಇಳಿಕೆಯಾಗುತ್ತಿರುವುದು ಕಂಡುಬರುತ್ತಿದೆ. ಶುಕ್ರವಾರ ಗೋವಾ ರಾಜ್ಯದಲ್ಲಿ ಅತ್ಯಂತ ಹೆಚ್ಚು ಚಳಿ ದಾಖಲಾಗಿದೆ. ಬೆಳಿಗ್ಗೆ ಹಾಗೂ ರಾತ್ರಿಯ ಸಮಯದಲ್ಲಿ ಚಳಿಯ ಪ್ರಮಾಣ ಹೆಚ್ಚಿರುವುದು ಕಂಡುಬರುತ್ತಿದೆ.

ಲಭ್ಯವಾಗಿರುವ ಮಾಹಿತಿಯ ಅನುಸಾರ- 12 ಡಿಸೆಂಬರ್ 1989 ರಂದು ಅತಂತ ಕಡಿಮೆ ಅಂದರೆ 15.7 ಡಿಗ್ರಿ ಯಷ್ಟು ಗೋವಾದಲ್ಲಿ ಚಳಿ ದಾಖಲಾಗಿತ್ತು. ಹಲವು ಬಾರಿ ಗೋವಾದಲ್ಲಿ ಡಿಸೆಂಬರ್ ತಿಂಗಳಲ್ಲಿ 16.17 ಡಿಗ್ರಿ ದಾಖಲಾಗಿತ್ತು. ಶುಕ್ರವಾರ ಗೋವಾ ರಾಜ್ಯದಲ್ಲಿ 17.5 ಡಿಗ್ರಿ (17.5 degrees in Goa state) ದಾಖಲಾಗಿದೆ. ಪ್ರಸಕ್ತ ವರ್ಷದ ಅತಿ ಹೆಚ್ಚು ಚಳಿಯ ದಿನವಾಗಿರಬಹುದು ಎಂದು ಕೂಡ ಊಹಿಸಲಾಗುತ್ತಿದೆ.

ಗೋವಾ ರಾಜ್ಯ ಹವಾಮಾನ ಇಲಾಖೆಯ ಸಂಚಾಲಕ ನಹುಷ್ ಕುಲಕರ್ಣಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ- ಉತ್ತರದಿಂದ ಬೀಸುವ ಗಾಳಿಯ ಪ್ರಭಾವ ಹೆಚ್ಚಾಗಿರುವುದರಿಂದ ಗೋವಾ ರಾಜ್ಯದಲ್ಲಿ ಹೆಚ್ಚು ಚಳಿಯಾಗುತ್ತಿದೆ. ಗೋವಾದಲ್ಲಿ ಇನ್ನೂ ಚಳಿ ಹೆಚ್ಚುವ ಸಾಧ್ಯತೆ ಇಲ್ಲ. ಆದರೆ ಇದೇ ರೀತಿಯಲ್ಲಿ ಚಳಿಯ ಪ್ರಮಾಣ ಮುಂದುವರೆಯಲಿದೆ. ಜನತೆ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಗೋವಾಕ್ಕೆ ಬರುವ ಪ್ರವಾಸಿಗರಿಗೂ ಚಳಿಯ ಅನುಭವ…
ಗೋವಾ ರಾಜ್ಯವು ಸಂಪೂರ್ಣ ಸಮುದ್ರ ತೀರವೇ ಆಗಿರುವುದರಿಂದ ಗೋವಾದಲ್ಲಿ ಸಹಜವಾಗಿಯೇ ಸೆಖೆಯ ಪ್ರಮಾಣ ಹೆಚ್ಚಾಗಿರುತ್ತದೆ. ಹೊಸ ವರ್ಷ ಸಂಭ್ರಮಾಚರಣೆಗೆ ಗೋವಾಕ್ಕೆ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಗೋವಾಕ್ಕೆ ಆಗಮಿಸುವ ಪ್ರವಾಸಿಗರಿಗೆ ಸದ್ಯ ಸೆಖೆಯ ಬದಲಾಗಿ ಭಾರಿ ಪ್ರಮಾಣದ ಚಳಿಯ ಅನುಭವವಾಗುತ್ತಿದೆ.

 

ಗೋವಾದಲ್ಲಿ ಸದ್ಯ ಭಾರಿ ಚಳಿಯಿಂದಾಗಿ ಮಾವಿನ ಮರಕ್ಕೆ ಭಾರಿ ಪ್ರಮಾಣದಲ್ಲಿ ಹೂವು ಬಿಡಲಾರಂಭಿಸಿದೆ. ಇದೇ ರೀತಿ ಇನ್ನೂ ಕೆಲ ದಿನ ಚಳಿ ಮುಂದುವರೆದರೆ ಪ್ರಸಕ್ತ ಬಶಾರಿ ಮಾವಿನ ಬೆಳೆ ಉತ್ತಮವಾಗಿರಲಿದೆ ಎಂದು ಸ್ಥಳೀಯ ರೈತರು ಅಭಿಪ್ರಾಯಪಟ್ಟಿದ್ದಾರೆ.