ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಶೀಘ್ರದಲ್ಲಿಯೇ ಇಲಾನ್ ಮಸ್ಕ ರವರ ಸ್ಟಾರ್ ಲಿಂಕ್ ಕಂಪನಿಯ ಹೈಸ್ಪೀಡ್ ಇಂಟರ್ ನೆಟ್  (Star Link Company High Speed ​​Internet) ಲಭ್ಯವಾಗಲಿದೆ. ಈ ಕುರಿತು ನಡೆಯುತ್ತಿರುವ ಪ್ರಯತ್ನಕ್ಕೆ ಇದೀಗ ವೇಗ ಲಭಿಸಿದೆ. ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಈಗಾಗಲೇ ಸ್ಟಾರ್ ಲಿಂಕ್ ಲಾರೆನ್ ಡ್ರೇಯರ್ ರವರೊಂದಿಗೆ ಚರ್ಚೆ ನಡೆಸಿದ್ದಾರೆ. ಸ್ಟಾರ್ ಲಿಂಕ್ ಇಂಟರ್ ನೆಟ್ ಗೋವಾಕ್ಕೆ ಬಂದರೆ ಗೋವಾದ ದುರ್ಗಮ ಪ್ರದೇಶ ಹಾಗೂ ಹಳ್ಳಿ ಹಳ್ಳಿ ಮೂಲೆಗೂ ಇಂಟರ್ ನೆಟ್ ಸೌಲಭ್ಯ ಲಭಿಸಲು ಸಹಾಯವಾಗಲಿದೆ.

ಪಣಜಿಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಸ್ಟಾರ್ ಲಿಂಕ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರೋಹನ್ ಖಂವಟೆ ಉಪಸ್ಥಿತರಿದ್ದರು. ಗೋವಾದಲ್ಲಿ ಶಾಲೆ, ಆರೋಗ್ಯ ಕೇಂದ್ರ, ಬೀಚ್ ಗಳು, ದುರ್ಗಮ ಕ್ಷೇತ್ರ, ಈ ಇಂಟರ್ ನೆಟ್ ಸೇವೆ ಲಭಿಸಿದರೆ ಡಿಜಿಟಲ್ ಗೋವಾ ಕನಸಿಗೆ ಇನ್ನಷ್ಟು ಬಲ ಸಿಗಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಇದುವರೆಗೂ ಸ್ಟಾರ್ ಲಿಂಕ್ ಹೈಸ್ಪೀಡ್ ಇಂಟರ್ ನೆಟ್ ಸೇವೆ (Star Link Company High Speed ​​Internet) ಆರಂಭಗೊಂಡಿಲ್ಲ. ಇದರಿಂದಾಗಿ ಭಾರತದಲ್ಲಿ ನಾವು ಇದುವರೆಗೂ ಯಾವುದೇ ಆರ್ಡರ್ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಟಾರ್ ಲಿಂಕ್ ಕಂಪನಿಯ ಪ್ರಮುಖ ಲಾರೆನ್ ಡ್ರೇಯರ್ ಮಾಹಿತಿ ನೀಡಿದ್ದಾರೆ. ಭಾರದ ನಾಗರೀಕರಿಗೆ ನಾವು ಹೈಸ್ಪೀಡ್ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲು ಉತ್ಸುಕರಾಗಿದ್ದೇವೆ. ಈ ಸೌಲಭ್ಯ ಆರಂಭಗೊಳಿಸಲು ಸರ್ಕಾರದಿಂದ ಪರವಾನಗಿ ಪಡೆದುಕೊಳ್ಳುವ ಕಾರ್ಯದಲ್ಲಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ.

ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು (World famous tourist destination) ಗೋವಾಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ದೇಶ ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ. ಗೋವಾದಲ್ಲಿ ಬಹುತೇಕ ಹಳ್ಳಿಗಳಲ್ಲಿ ಇಂಟರ್ ನೆಟ್ ಸೌಲಭ್ಯವಿಲ್ಲ. ಇಷ್ಟೇ ಅಲ್ಲದೆಯೇ ನಗರದಲ್ಲಿಯೂ ಇಂಟರ್ ನೆಟ್ ವೇಗವಿಲ್ಲ. ಇದರಿಂದಾಗಿ ಹೈಸ್ಪೀಡ್ ಇಂಟರ್ ನೆಟ್ ಆರಂಭಗೊಂಡರೆ ಗೋವಾದ ಜನತೆಗೆ ಹಾಗೂ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.