ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿರುವ ಬರ್ಚ ಬೈ ರೋಮಿಯೊ ಲೆನ್ ನೈಟ್ ಕ್ಲಬ್ ನಲ್ಲಿ (Birch by Romeo Lane Night Club) ಶನಿವಾರ ರಾತ್ರಿ ಅಗ್ನಿ ದುರಂತದಲ್ಲಿ 25 ಜನ ಸಾವನ್ನಪ್ಪಿದ್ದರು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕ್ಲಬ್ ಮಾಲೀಕರಾದ ಗೌರವ ಲೂಥ್ರ ಮತ್ತು ಸೌರಭ್ ಲೂಥ್ರ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇವರಿಬ್ಬರೂ ಥೈಲ್ಯಾಂಡ್ ಗೆ ಪರಾರಿಯಾಗಿದ್ದಾರೆ ಎಂದು ಗೋವಾ ಪೋಲಿಸರಿಂದ ಮಾಹಿತಿ ಲಭ್ಯವಾಗಿದೆ.
ಡಿಸೆಂಬರ್ 7 ರಂದು ಭಾನುವಾರ ಬೆಳಿಗ್ಗೆ 5.30 ರ ಇಂಡಿಗೊ ವಿಮಾನ 6 ಇ 1073 ರಲ್ಲಿ ಕ್ಲಬ್ ಮಾಲೀಕರಿಬ್ಬರೂ ಥೈಲ್ಯಾಂಡ್ ನ (Thailand) ಫುಕೆಟ್ ಗೆ ತೆರಳಿದ್ದಾರೆ ಎನ್ನಲಾಗಿದೆ. ಕ್ಲಬ್ ನ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಭರತ್ ಕೋಹ್ಲಿಯನ್ನು ಗೋವಾ ಪೋಲಿಸರು ದೆಹಲಿಯಲ್ಲಿ ಬಂಧಿಸಿ ಗೋವಾಕ್ಕೆ ಕರೆತಂದಿದ್ದಾರೆ.
ದೆಹಲಿಗೆ ತೆರಳಿದ್ದ ಗೋವಾ ಪೋಲಿಸರು ಕ್ಲಬ್ ಮಾಲೀಕರ ಮನೆಯ ಮೇಲೆ ಧಾಳಿ ನಡೆಸಿದ್ದರು. ಆದರೆ ಅವರಿಬ್ಬರೂ ಅಲ್ಲಿ ಪತ್ತೆಯಾಗಿರಲಿಲ್ಲ. ವಿದೇಶಕ್ಕೆ ಪಲಾಯನ ಗೈದಿರುವ ಬಗ್ಗೆ ಪೋಲೀಸರಿಗೆ ಅಧೀಕೃತ ಮಾಹಿತಿ ಲಭ್ಯವಾಗಿದೆ. ಇವರಿಬ್ಬರ ವಿರುದ್ಧ ಪೋಲಿಸರು ಲಾಕ್ ಔಟ್ ನೋಟಿಸ್ (Lock out notice) ಜಾರಿಗೊಳಿಸಿದ್ದಾರೆ. ಗೋವಾ ಸಿಬಿಐ ಇಂಟರ್ ಪೋಲ್ (CBI Interpol) ಇಲಾಖೆಯ ಸಹಯೋಗದೊಂದಿಗೆ ಪೋಲಿಸರು ಲೂಥ್ರಾ ಸಹೋದರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕ್ಲಬ್ ನೆಲಸಮಗೊಳಿಸಲು ಆದೇಶ…
ಗೋವಾ ಹಡಪಡೆಯಲ್ಲಿರುವ ನೈಟ್ ಕ್ಲಬ್ ನಲ್ಲಿ ಅಗ್ನಿ ಅವಘಡದಲ್ಲಿ 25 ಜನ ಸಾವನ್ನಪ್ಪಿದ್ದರು. ಈ ಕಟ್ಟಡಕ್ಕೆ ಸೂಕ್ತ ಪರವಾನಗಿ ಪಡೆದುಕೊಂಡಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇದೀಗ ಈ ಕ್ಲಬ್ ತೆರವುಗೊಳಿಸಲು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಆದೇಶ ಹೊರಡಿಸಿದ್ದಾರೆ.
