ಸುದ್ಧಿಕನ್ನಡ ವಾರ್ತೆ
ಪಣಜಿ(ವಾಸ್ಕೊ): ಗೋವಾದಲ್ಲಿ ಡಿಸೆಂಬರ್ 20 ರಂದು ನಡೆಯಲಿರುವ ಜಿಲ್ಲಾ ಪಂಚಾಯತ ಚುನಾವಣೆಗೆ (Zilla Panchayat Election) ಗೋವಾ ಬಿಜೆಪಿ ಕರ್ನಾಟಕ ಸೆಲ್ ಕಾರ್ಯದರ್ಶಿ ಹಾಗೂ ಕನ್ನಡಪರ ಹೋರಾಟಗಾರರಾದ ರಾಜೇಶ್ ಶೆಟ್ಟಿ ವಾಸ್ಕೊ ಸಾಂಕೊಲಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಂಗಳವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜುವಾರಿನಗರ ಕನ್ನಡ ಸಮಘದ ಅಧ್ಯಕ್ಷ ಶಿವಾನಂದ ಬಿಂಗಿ, ಚಂದ್ರಶೇಖರ ಬಿಂಗಿ, ಅರವಿಂದ ಅಕ್ಕಿ, ಪರಶುರಾಮ ಗಣಾಚಾರಿ , ಬಾಪುಗೌಡ ಮ್ಯಾಗೇರಿ, ಗುರುಪಾದಯ್ಯ ಹಿರೇಮಠ, ಕನ್ನಡ ಸಂಘಟನೆಗಳ ಪದಾಧಿಕಾರಿಗಳು,ಕನ್ನಡಿಗರು,ಉಪಸ್ಥಿತರಿದ್ದರು.
ಸಾಂಕೊಲಾ ಕ್ಷೇತ್ರವು ಕನ್ನಡಿಗರು ಹೆಚ್ಚಾಗಿ ವಾಸಿಸುವ ಕ್ಷೇತ್ರಗಳಲ್ಲೊಂದಾಗಿದೆ. ಈ ಕ್ಷೇತ್ರದಲ್ಲಿ ಒಟ್ಟೂ ಸುಮಾರು 35,000 ಮತಗಳಿದ್ದು ಇದರಲ್ಲಿ ಸುಮಾರು 15,000 ಮತಗಳು ಕನ್ನಡಿಗರ ಮತಗಳೇ ಆಗಿದೆ. ಸದ್ಯ ಈ ಕ್ಷೇತ್ರದಲ್ಲಿ 7 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕನ್ನಡಿಗರ ಮತ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಕನ್ನಡಿಗರ ಪರ ಹೋರಾಟ ಮಾಡುತ್ತಲೇ ಬಂದಿರುವ ರಾಜೇಶ್ ಶೆಟ್ಟಿ ರವರು ಜಯಗಳಿಸುವ ನಿರೀಕ್ಷೆ ಹೆಚ್ಚಾಗಿದೆ ಎಂದೇ ಹೇಳಲಾಗುತ್ತಿದೆ.
ಈಗಾಗಲೇ ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ರಾಜೇಶ್ ಶೆಟ್ಟಿ ರವರಿಗೆ ಸ್ಥಳೀಯ ಟ್ರಕ್ ಮಾಲೀಕರ ಸಮಘಟನೆ, ರಿಕ್ಷಾ ಮಾಲೀಕರು ಹಾಗೂ ಚಾಲಕರ ಸಂಘಟನೆ, ಟಿಪ್ಪರ್ ಮಾಲೀಕರ ಸಂಘಟನೆ, ಗೋವಾದ ವಿವಿಧ ಕನ್ನಡಪರ ಸಂಘಟನೆಗಳು ರಾಜೇಶ್ ಶೆಟ್ಟಿ ರವರಿಗೆ ಸಂಪೂರ್ಣ ಬೆಂಬಲ ಸೂಚಿಸಿವೆ.
ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಪ್ರತಿಕ್ರಿಯೆ ನೀಡಿ- ಕನ್ನಡಪರ ಹೋರಾಟ ಮಾಡುತ್ತಲೇ ಬಂದಿರುವ ರಾಜೇಶ್ ಶೆಟ್ಟಿ ರವರು ಗೋವಾದಲ್ಲಿರುವ ಎಲ್ಲ ಕನ್ನಡಿಗರ ಪ್ರತಿನಿಧಿಯಾಗಿ ಸ್ಫರ್ಧಿಸಿದ್ದಾರೆ. ಇದರಿಂದಾಗಿ ರಾಜೇಶ್ ಶೆಟ್ಟಿ ರವರನ್ನು ಗೆಲ್ಲಿಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ. ರಾಜೇಶ್ ಶೆಟ್ಟಿ ರವರು ಗೆದ್ದರೆ ಕನ್ನಡಿಗರೇ ಗೆದ್ದಂತೆ. ಗೋವಾದಲ್ಲಿ ಕನ್ನಡಿಗರನ್ನು ಘಾಟಿ ಎಂದು ನಿಂದಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡಿಗರ ಗೆಲುವು ಬಹುಮುಖ್ಯವಾಗಿದೆ ಎಂದರು.
