ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜಧಾನಿ ಪಣಜಿ ಸಮೀಪದ ಪಿಲಾರ್ ನ ಫಾದರ್ ಆಗ್ನೇಲ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಜಾರ್ಖಂಡ್ ಸಮುದಾಯದ ಕಾರ್ಯಕ್ರಮದಲ್ಲಿ ಗದ್ದಲ ಕೋಲಾಹಲವೇ ನಡೆದಿದೆ. ಯುವಕರ ಗುಂಪೊಂದು ಕಾರ್ಯಕ್ರಮದ ಸಂಪೂರ್ಣ ವೇದಿಕೆಯನ್ನೇ ಧ್ವಂಸಗೊಳಿಸಿದ ಘಟನೆಯೊಂದು ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೋಲಿಸರು ಲಾಠಿ ಚಾರ್ಜ ಮಾಡಿ ಇಡೀ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ಘಟನೆಯಲ್ಲಿ ಸುಮಾರು 20 ಲಕ್ಷ ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ.
ಲಭ್ಯವಾಗಿರುವ ಮಾಹಿತಿಯ ಅನುಸಾರ- ಜಾರ್ಖಂಡ್ ಸಮುದಾಯದ ಈ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕವಾಗಿ ಜನರು 350 ರೂ ಪಾವತಿಸಿದ್ದರು. ಮೈದಾನದಲ್ಲಿ ಕಾರ್ಯಕ್ರಮ ಆರಂಭವಾಗಲಿಲ್ಲ, ಆಯೋಜಕರೂ ಗೈರಾಗಿದ್ದರು. ಇದರಿಂದಾಗಿ ನೆರೆದಿದ್‍ದ ಜನರೆಲ್ಲ ರೊಚ್ಚಿಗೆದ್ದಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಲುಪುವ ಸಂದರ್ಭದಲ್ಲಿ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದರು. ಪೋಲಿಸರು ಲಾಠಿಚಾರ್ಜ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಆಕ್ರೋಶಗೊಂಡಿದ್ದ ಜನರು ಇಡೀ ವೇದಿಕೆಯನ್ನೇ ಧ್ವಂಸಗೊಳಿಸಿದರು. ಸುಮಾರು 11 ಲಕ್ಷ ರೂ ಸೌಂಡ್ ಸಿಸ್ಟಮ್ ಸಂಪೂರ್ಣ ನುಚ್ಚುನೂರು ಮಾಡಿದ್ದಾರೆ. ಇಷ್ಟೇ ಅಲ್ಲದೆಯೇ ಇಡೀ ಸೆಟಪ್ ನ್ನೆ ಹಾಳುಮಾಡಿದರು. ಕೆಲವು ಕಡೆಗಳಲ್ಲಿ ಬೆಂಕಿ ಹಚ್ಚುವ ಪ್ರಯತ್ನವನ್ನೂ ಮಾಡಿದರು. ಕಾರ್ಯಕ್ರಮ ಆಯೋಜನಾ ಸ್ಥಳದಲ್ಲಿ ಗೊಂದಲವುಂಟಾಗುತ್ತಿದೆ ಎಂದು ತಿಳಿದ ಕೂಡಲೇ ಎಲ್ಲ ಹಣವನ್ನು ತೆಗೆದುಕೊಂಡು ಆಯೋಜಕರು ಪರಾರಿಯಾಗಿದ್ದಾರೆ ಎಂದು ಅಲ್ಲಿ ನೆರೆದಿದ್ದ ಜನರಿಗೆ ಮಾಹಿತಿ ಲಭ್ಯವಾಗಿತ್ತು.
ಪೋಲಿಸರು 10 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹಲವರನ್ನು ಬಂಧಿಸಿದ್ದು, ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
