ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಬರ್ಚ ಬಾಯ್ ರೋಮಿಯೊ ಲೆನ್ ನೈಟ್ ಕ್ಲಬ್ ನಲ್ಲಿ ( Bircha Boy Romeo Lane Night Club) ಶನಿವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 25 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾ ಪೋಲಿಸರು ಈಗಾಗಲೇ 5 ಜನರನ್ನು ಬಂಧಿಸಿದ್ದು ಕ್ಲಬ್ ಮಾಲೀಕರಾದ ಸೌರಬ್ ಲುಥರಾ ಹಾಗೂ ಗೌರವ ಲುಥರಾ ರವರ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ. ಇವರು ವಿದೇಶಕ್ಕೆ ಪಲಾಯನಗೈಯ್ಯುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ “ಲಾಕ್ ಔಟ್”ನೋಟಿಸ್ “Lock Out” Notice ಜಾರಿಗೊಳಿಸಲಾಗಿದ್ದು ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕ್ಲಬ್ ಮಾಲೀಕಲ್ಲೋರ್ವರಾದ ಸೌರಭ್ ಲುಥರಾ ರವರು ಇಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ-ಘಟನೆಗೆ ದುಃಖ ವ್ಯಕ್ತಪಡಿಸಿದ್ದರು. ಈ ಅಪರಿಮಿತ ದುಃಖದಲ್ಲಿ ಕ್ಲಬ್ ಮೃತ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಅಗತ್ಯ ಎಲ್ಲ ಸಹಾಯ ಸಹಕಾರ ನೀಡಲಿದೆ ಎಂಬ ಭರವಸೆ ನೀಡಿದ್ದರು.

ಗೋವಾದಲ್ಲಿ ಸಂಭವಿಸಿದ ನೈಟ್ ಕ್ಲಬ್ ದುರ್ಘಟನೆಗೆ ಸಂಬಂಧಿಸಿದಂತೆ ದಂಡಾಧಿಕಾರಿಗಳ ಮೂಲಕ ತನಿಖೆ ನಡೆಸಲು ಗೋವಾ ಸರ್ಕಾರವು 4 ಸದಸ್ಯೀಯ ವಿಶೇಷ ಸಮೀತಿಯನ್ನು (4 Member Special Committee) ಸ್ಥಾಪಿಸಿದೆ. ಉತ್ತರಗೋವಾ ಜಿಲ್ಲಾಧಿಕಾರಿ ಅಂಕಿತ್ ಯಾದವ್, ದಕ್ಷಿಣ ಗೋವಾ ಪೋಲಿಸ್ ಅಧೀಕ್ಷಕ ಟಿಕಮ್ ಸಿಂಗ್ ವರ್ಮಾ, ಫಾರೆನ್ಸಿಕ್ ಸಾಯನ್ಸ ಸಂಚಾಲಕ ಆಶುತೋಷ ಆಪಟೆ, ಅಗ್ನಿಶಾಮಕ ದಳದ ಉಪಸಂಚಾಲಕ ರಾಜೇಂದ್ರ ಹಳದಣಕರ್ ರವರ ನೇತೃತ್ವದ ಸಮೀತಿ ಸ್ಥಾಪನೆಯಾಗಿದೆ.

ಹಡಪಡೆಯ ನೈಟ್ ಕ್ಲಬ್ ಅಗ್ನಿ ದುರಂತದಲ್ಲಿ ಮೃತ 25 ಜನರ ಪೈಕಿ 19 ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 16 ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ನೀಡಲಾಗಿದೆ. ಗಾಯಾಳುಗಳಾದ ಅತಿಶ್ ಮೆಹತಾ ರವರನ್ನು ಸೋಮವಾರ ಆಸ್ಪತ್ರೆಯಿಂದ ಡಿಶ್ಚಾರ್ಜ ಮಾಡಲಾಗಿದೆ, ಇನ್ನುಳಿದವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ನೈಟ್ ಕ್ಲಬ್ ಗಳಿಗೆ ಹೊಸ ಮಾರ್ಗಸೂಚಿ..?
ಗೋವಾದಲ್ಲಿ ನೈಟ್ ಕ್ಲಬ್ ದುರ್ಘಟನೆಯ ನಂತರ ಸರ್ಕಾರ ಎಚ್ಚೆತ್ತುಕೊಂಡಿದ್ದು ನೈಟ್ ಕ್ಲಬ್ ಗಳಿಗೆ ಹೊಸ ಮಾರ್ಗಸೂಚಿಯನ್ನು (New guidelines) ಹೊರಡಿಸಿದೆ. ನೈಟ್ ಕ್ಲಬ್ ಗಳಲ್ಲಿ ಅಗತ್ಯವಿರುವ ಎಲ್ಲ ಪರವಾನಗಿ ಖಡ್ಡಾಯವಾಗಿ ಪಡೆದುಕೊಳ್ಳಲು ಆದೇಶಿಸಲಾಗಿದೆ. ಇಷ್ಟೇ ಅಲ್ಲದೆಯೇ ಆಸನ ವ್ಯವಸ್ಥೆಗಿಂತ ಹೆಚ್ಚು ಜನರು ಇರುವಂತಿಲ್ಲ, ಸ್ಮೋಕ್ ಮತ್ತು ಹೀಟ್ ಡಿಡೆಕ್ಟರ್, ಅಲಾರಾಮ್ ಸಿಸ್ಟಮ್, ಸ್ಪಿಂಕಲರ್ ವ್ಯವಸ್ಥೆ, ಸೇರಿದಂತೆ ಇತರ ಅಗ್ನಿಶಮನ ಉಪಕರಣ ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿರುವಂತೆಯೂ ಆದೇಶ ಹೊರಡಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಆದೇಶದಲ್ಲಿ ನಮೂದಿಸಲಾಗಿದೆ.