ಸುದ್ಧಿಕನ್ನಡ ವಾರ್ತೆ
ಪಣಜಿ: ಉತ್ತರಗೋವಾದ ಹಡಪಡೆಯಲ್ಲಿನ ಬರ್ಚ ಬಾಯ್ ರೋಮಿಯೊ ಲೆನ್ ನೈಟ್ ಕ್ಲಬ್ ನಲ್ಲಿ (Bircha Boy Romeo Lane Night Club )ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 25 ಜನ ಸಾವನ್ನಪ್ಪಿದ್ದಾರೆ. ಕ್ಲಬ್ ನಲ್ಲಿ ನೂರಾರು ಜನ ಇದ್ದುದರಿಂದ ಅಗ್ನಿ ಅವಘಡ ಸಂಭವಿಸಿದಾಗ ಹೊರ ಬರಲು ಬಾಗಿಲು ಸಣ್ಣದಾಗಿದ್ದ ಕಾರಣ ಹಲವರು ಒಳಗೆಯೇ ಸಿಕ್ಕಿಬಿದ್ದು ಪ್ರಾಣಬಿಟ್ಟರು ಎಂದೇ ಹೇಳಲಾಗುತ್ತಿದೆ. ವೀಡಿಯೋವೊಂದರಲ್ಲಿ ವೈರಲ್ ಆಗಿರುವಂತೆ ಕ್ಲಬ್ ನಲ್ಲಿ ಡಾನ್ಸ ನಡೆಯುತ್ತಿರುವಾಗ ಬೆಂಕಿಹೊತ್ತಿಕೊಳ್ಳುವಂತಹ ವಸ್ತುಗಳ ಬಳಕೆಯಿಂದ ಈ ದುರ್ಘಟನೆ ಸಂಭವಿಸಿರುವುದು ಮೇಲ್ನೊಟಕ್ಕೆ ಕಂಡುಬರುತ್ತಿದೆ. ಅಗ್ನಿ ಅವಘಡವು ಮೊದಲ ಮಹಡಿಯಿಂದ ಸಂಭವಿಸಿದೆ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಹಡಪಡೆ ಬರ್ಚ ಬಾಯ್ ರೋಮಿಯೊ ಲೆನ್ ಕ್ಲಬ್ ನಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಇದುವರೆಗೂ 4 ಜನರನ್ನು ಪೋಲಿಸರು ಬಂಧಿಸಿದ್ದಾರೆ. ಕ್ಲಬ್ ಮಾಲೀಕ ಸೌರಭ್ ಲುಥರಾ ಹಾಗೂ ಗೌರವ ಲುಥರಾ ರವರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಇವರ ಬಂಧನಕ್ಕಾಗಿ ಗೋವಾ ಪೋಲಿಸರು ದೆಹಲಿಗೆ ತೆರಳಿದ್ದಾರೆ. ಕ್ಲಬ್ ನಡೆಸಲು ಅನಧೀಕೃತವಾಗಿ ಪರವಾನಗಿ ನೀಡಿದ ಯಾವುದೇ ಅಧಿಕಾರಿಯನ್ನೂ ಬಿಡುವುದಿಲ್ಲ, ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.
ಕೇವಲ 40 ಸೆಕೆಂಡಿನಲ್ಲಿ ಎಲ್ಲವೂ ಮುಗಿಯಿತು….
ಶನಿವಾರ ರಾತ್ರಿ 11.45 ರ ಸುಮಾರ ನೈಟ್ ಕ್ಲಬ್ ನಲ್ಲಿ ಡಾನ್ಸ ನಡೆಯುತ್ತಿತ್ತು. ಅಲ್ಲಿ ಮೇಲ್ಚಾವಣಿಯಲ್ಲಿ ಹೊತ್ತಿಕೊಂಡ ಬೆಂಕಿ ಕೇವಲ 40 ಸೆಕೆಂಡಿನಲ್ಲಿ ಇಡೀ ಕ್ಲಬ್ ಗೆ ಆವರಿಸಿತ್ತು. ಆಗ ಎಲ್ಲೆಡೆ ಕೂಗಾಟ …ಜೀವ ಉಳಿಸಿಕೊಳ್ಳಲು ಓಡಲು ಆರಂಭಿಸಿದರು. ದುರಾದೃಷ್ಠವಶಾತ್ ಕ್ಲಬ್ ನಲ್ಲಿ ತುರ್ತು ನಿರ್ಗಮನ ದಂತಹ ಯಾವುದೇ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಮುಂದೆ ಇದ್ದ ಕಿರಿದಾದ ಬಾಗಿಲಿನಿಂದಲೇ ಎಲ್ಲರೂ ಹೊರಗೆ ಬರಬೇಕಿತ್ತು. ಅಲ್ಲಿ ಎಲ್ಲರೂ ಹೊರ ಬರಲಾರದೆಯೇ ಹಲವರು ಒಳಗೆಯೇ ಸಿಲುಕಿಕೊಂಡರು.
ವಾಗಾತೋರ್ ಆಸಗಾಂವನಲ್ಲಿ ಕ್ಲಬ್ ಸೀಲ್…!
ರೋಮಿಯೊ ಲೇನ್ ರವರ ವಾಗಾತೋರ್ ನಲ್ಲಿನ ಕ್ಲಬ್ ಹಾಗೂ ಆಸಗಾಂವ ನಲ್ಲಿನ ಬ್ಯೂಟಿ ರೆಸಾರ್ಟನ್ನು ತಹಶೀಲ್ದಾರ್ ಕಾರ್ಯಾಲಯದ ಅಧಿಕಾರಿಗಳಿಂದ ಸೀಲ್ ಮಾಡಲಾಗಿದೆ.
ಈ ದುರ್ಘಟನೆಗೆ ಸಂಬಂಧಿಸಿದಂತೆ ಕ್ಲಬ್ ವ್ಯವಸ್ಥಾಪಕ ರಾಜೀವ್ ಮೋಡಕ್ (49 ನವದೆಹಲಿ), ವಿವೇಕ್ ಸಿಂಗ್ (27,ಉತ್ತರಪ್ರದೇಶ), ಬಾರ್ ವ್ಯವಸ್ಥಾಪಕ ರಾಜೀವ್ ಸಿಂಘಾನಿಯಾ (32,ಉತ್ತರಪ್ರದೇಶ), ಗೇಟ್ ವ್ಯವಸ್ಥಾಪಕ ಹಿಂಆಂಶು ಠಾಕೂರ್ (32,ನವದೆಲಿ) ಈ ನಾಲ್ವರನ್ನು ಪೋಲಿಸರು ಬಂಧಿಸಿದ್ದಾರೆ.
