ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿರುವ ಬಿರ್ಚ ಬೈ ರೋಮಿಯೋ ಲೇನ್ ಕ್ಲಬ್ ನಲ್ಲಿ ಅಗ್ನಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯು ಕ್ಲಬ್ ನ ಅಕ್ರಮ ನಿರ್ಮಾಣ ಹಾಗೂ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕುರಿತಂತೆ ಗಂಭೀರ ಪ್ರಶ್ನೆ ಹುಟ್ಟುಹಾಕಿದೆ. ಈ ಕ್ಲಬ್ ನ್ನು ಸೌರಭ್ ಲೂತ್ರಾ ಎಂಬ ವ್ಯಕ್ತಿ ನಡೆಸುತ್ತಿದ್ದರು ಎಂದು ಅರಪೋರಾ ಗ್ರಾಪಂ ಅಧ್ಯಕ್ಷ ರೋಷನ್ ರೇಡ್ಕರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಗೌರವ (39) ಮತ್ತು ಸೌರಭ್ (35) ಇವರಿಬ್ಬರೂ ಸಹೋದದರು. ಎಂಜಿನೀಯರಿಂಗ್ ಅಧ್ಯಯನದ ನಂತರ ಗೌರವ 15 ವರ್ಷ ಮತ್ತು ಸೌರಭ್ 10 ವರ್ಷ ಟಿಸಿಎಸ್ ಮತ್ತು ಜೆಕೆ ಗ್ರುಪ್ ನಂತಹ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿದರು. 2016 ರಲ್ಲಿ ಅವರು ತಮ್ಮ ಕಾರ್ಪೊರೇಟ್ ವೃತ್ತಿಜೀವನವನ್ನು ತೊರೆದು ಆಹಾರ ಮತ್ತು ಪಾನೀಯ ಉದ್ಯಮವನ್ನು ಪ್ರವೇಶಿಸಿದರು.

ಈ ಕ್ಲಬ್ ಕಾನೂನು ಸಿಂಧುತ್ವದ ಬಗ್ಗೆ ಪಂಚಾಯತ ಅಧ್ಯಕ್ಷ ರೋಷನ್ ರೇಡ್ಕರ್ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದಾಗಿ ಇದು ಸ್ಥಳೀಯ ಆಡಳಿತದ ಪಾತ್ರದ ಬಗ್ಗೆ ಕೂಡ ಹಲವು ಪ್ರಶ್ನೆ ಹುಟ್ಟುಹಾಕಿದೆ. ಕ್ಲಬ್ ಯಾವುದೇ ಕಟ್ಟಡ ಪರವಾನಗಿ ಹೊಂದಿಲ್ಲ. ಕ್ಲಬ್ ನ್ನು ಪರಿಸರದ ಸೂಕ್ಷ್ಮ ಸಾಲ್ಟ ಪ್ಲ್ಯಾನ್ ಸ್ಥಳದಲ್ಲಿ ನಿರ್ಮಿಸಲಾಗಿದೆ. ಮತ್ತು ಸಿಆರ್ ಜೆಡ್ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಪಂಚಾಯತ ಅಧ್ಯಕ್ಷ ರೋಷನ್ ಆರೋಪಿಸಿದ್ದಾರೆ.
ಈ ಕ್ಲಬ್ ಗೆ ಪರವಾನಗಿ ಇಲ್ಲದ ಕಾರಣ ಗ್ರಾಮ ಪಂಚಾಯತಿಯು ಈ ಕ್ಲಬ್ ಕೆಡಗುವ ಕುರಿತಂತೆ ನೋಟಿಸ್ ನೀಡಿತ್ತು. ಈ ನೋಟಿಸ್ ಗೆ ಮೇಲ್ಮನವಿ ಸಲ್ಲಿಸಿದ್ದರು, ನ್ಯಾಯಾಲಯವು ಅದನ್ನು ತಡೆಹಿಡಿದು ಕ್ಲಬ್ ಮುಂದುವರೆಸಲು ಅವಕಾಶ ನೀಡಲಾಗಿತ್ತು ಎನ್ನಲಾಗಿದೆ.
