ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿ ನೈಟ್ ಕ್ಲಬ್ ನಲ್ಲಿ ಭೀಕರ ಅಗ್ನಿ ಅವಘಡದಲ್ಲಿ 25 ಜನರು ಸಜೀವ ದಹನವಾಗಿದ್ದಾರೆ. ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡವರ ಕುಟುಂಬಕ್ಕೆ ಪ್ರಧಾನಮಂತ್ರಿಗಳು ತಲಾ 2 ಲಕ್ಷ ರೂ ಘೋಷಿಸಿದ್ದು, ಗೋವಾ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿಗಳು 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇಷ್ಟೇ ಅಲ್ಲದೆಯೇ ಗಾಯಾಳುಗಳಿಗೆ ಪ್ರಧಾನಮಂತ್ರಿ ನಿಧಿಯಿಂದ 50,000 ರೂ ಹಾಗೂ ಗೋವಾ ರಾಜ್ಯ ಸರ್ಕಾರದಿಂದ 50,000 ರೂ ಪರಿಹಾರವನ್ನು ಘೋಷಿಸಲಾಗಿದೆ.

ನೈಟ್ ಕ್ಲಬ್ ಅಗ್ನಿ ಅವಘಡದಲ್ಲಿ ಮೃತಪಟ್ಟವರಲ್ಲಿ ಕೆಲವರ ಗುರುತು ಮಾತ್ರ ಪತ್ತೆಯಾಗಿದ್ದು, ಗುರುತು ಪತ್ತೆಯಾದವರ ಮೃತದೇಹವನ್ನು ಅವರ ಮನೆಗೆ ಕಳುಹಿಸಲು ಸರ್ಕಾರಿ ಖರ್ಚಿನಲ್ಲಿಯೇ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಪೋಲಿಸ್ ಎಸ್ ಡಿ ಎಂ ಸಮೀತಿ ಸ್ಥಾಪನೆ ಮಾಡಲಾಗಿದೆ.
ಈ ದುರ್ಘಟನೆಯ ನಂತರ ಇದೀಗ ಗೋವಾ ರಾಜ್ಯದಲ್ಲಿನ ಎಲ್ಲ ಕ್ಲಬ್ ಗಳ ಆಡಿಟ್ ನಡೆಸಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ. ಆಡಿಟ್ ನಡೆಸಲು ವಿಶೇಷ ಸಮೀತಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಮೂಲದ ಪ್ರವಾಸಿಗ ಸಾವು…..
ಗೋವಾದಲ್ಲಿ ಸಂಭವಿಸಿದ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಸ್ಪೋಟ ಘಟನೆಯಲ್ಲಿ ಬೆಂಗಳೂರು ಮೂಲದ ಪ್ರವಾಸಿಗ ಇಸಾಕ್ ಸಾವನ್ನಪ್ಪಿದ್ದಾರೆ. ಗೋವಾ ಪ್ರವಾಸಕ್ಕೆ ಬಂದಿದ್ದ ಇಸಾಕ್ ಹಡಪಡೆಯಲ್ಲಿನ ನೈಟ್ ಕ್ಲಬ್ ಗೆ ತೆರಳಿದ್ದ. ಘಟನೆ ಸಂಭವಿಸುವ ಕೆಲ ಹೊತ್ತಿನ ಮುಂಚೆಯೇ ಅಲ್ಲಿಂದ ನಿರ್ಗಮಿಸಿದ್ದ ಈತ ನೈಟ್ ಕ್ಲಬ್ ನಲ್ಲಿ ಮೊಬೈಲ್ ಬಿಟ್ಟುಬಂದಿದ್ದರಿಂದ ಮತ್ತೆ ಕ್ಲಬ್ ಗೆ ಪ್ರವೇಶಿಸಿದ್ದ. ಆ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಬೆಂಗಳೂರು ಮೂಲದ ಪ್ರವಾಸಿಗ ಸಾವನ್ನಪ್ಪಿದ್ದಾನೆ.