ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ): ನಮ್ಮೊಂದಿಗೆ ಇತರರ ಬಗ್ಗೆ ವಿಚಾರ ಮಾಡುವಾಗ ಸಂಸ್ಕøತಿ,ಧರ್ಮ, ಹಾಗೂ ಪರಂಪರೆಯ ಪಾಲನೆ ಮಾಡಬೇಕು. ಲೌಕಿಕ ಹಾಗೂ ಆಧ್ಯಾತ್ಮಿಕ ಜೀವನಕ್ಕಾಗಿ ಜ್ಞಾನ ಸಂಪಾದನೆಯು ಬಹಳ ಮಹತ್ವದ್ದಾಗಿದೆ. ಜೀವಾತ್ಮ ಹಾಗೂ ಪರಮಾತ್ಮ ಇವೆರಡೂ ಒಂದೇ ಆಗಿದ್ದು ಭಗವಂತನ ಪ್ರಾಪ್ತಿಗಾಗಿ ಯೋಗ್ಯ ವಿಚಾರ ಮಾಡಿ ಎಂದು ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕವಳೆ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀಜಿ ನುಡಿದರು.
ಗೋವಾದ ಕಾಣಕೋಣದ ಶ್ರೀ ಪರ್ತಗಾಳಿ ಜೀವೋತ್ತಮ ಮಠದ 550 ನೇಯ ವರ್ಧಂತಿ ಉತ್ಸವದಲ್ಲಿ ಧರ್ಮಸಭೆಯಲ್ಲಿ ಉಪಸ್ಥಿತರಿದ್ದು ಅವರು ಆಶೀರ್ವಚನ ನೀಡುತ್ತಿದ್ದರು.
ಎಷ್ಟೇ ಸಂಕಷ್ಟದ ಪರಿಸ್ಥಿತಿ ಬಂದರೂ ಕೂಡ ನಮ್ಮ ಧರ್ಮವನ್ನು ಬಿಡಬಾರದು ಪ್ರಪಂಚದೊಂದಿಗೆ ಪಾರಮಾರ್ಥವನ್ನೂ ಸಾಧಿಸಬೇಕು. ಇಂದಿನ ಮೊಬೈಲ್ ಯುಗದಲ್ಲಿ ಶ್ರೀರಾಮ ನಾಮ ಜಪವನ್ನು ಮರೆಯಬಾರದು. ನಮ್ಮ ಕುಲದೇವರು ಹಾಗೂ ಕುಲಧರ್ಮವನ್ನು ಮುಂದುವರೆಸಿಕೊಂಡು ಹೋಗಬೇಕು. ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿ ರವರು ಅತ್ಯಂತ ಬುದ್ಧಿವಂತರು ಹಾಗೂ ದೂರದೃಷ್ಠಿವುಳ್ಳವರಾಗಿದ್ದಾರೆ. ಅವರು ಕಳೆದ ನಾಲ್ಕು ವರ್ಷದಲ್ಲಿ ಐತಿಹಾಸಿಕ ರೀತಿಯಲ್ಲಿ ಮಠದಲ್ಲಿ ಹಲವು ಬದಲಾವಣೆ ತಂದಿದ್ದಾರೆ. 77 ಅಡಿ ಶ್ರೀರಾಮನ ಕಂಚಿನ ಮೂರ್ತಿ ನಿರ್ಮಾಣದ ಸಂದರ್ಭದಲ್ಲಿ ಕವಳೆ ಮಠ ಹಾಗೂ ಪರ್ತಗಾಳಿ ಮಠ ಜೊತೆ ಜೊತೆಗೆ ಇದೆ ಎಂಬುದನ್ನು ತೋರಿಸಿದಂತಾಗಿದೆ ಎಂದು ಕವಳೆ ಮಠದ ಶ್ರೀಗಳು ನುಡಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರು ಆಶೀರ್ವಚನ ನೀಡಿ- ಶ್ರೀಗೋಕರ್ಣ ಪರ್ತಗಾಳಿ ಮಠ ಹಾಗೂ ಕವಳೆಮ ಮಠ ಇವೆರಡಕ್ಕೂ ಹಳೇಯ ಸಂಬಧವಿದೆ. ಪರ್ತಗಾಳಿ ಮಠ ಆಯೋಜಿಸಿದ್ದ ಶ್ರೀರಾಮ ನಾಮ ಜಪ ಅಭಿಯಾನಕ್ಕೆ ಕವಳೆ ಮಠದ ಶಿಷ್ಯವರ್ಗದಿಂದ ಬಹುಮೂಲ್ಯ ಸಹಕಾರ ಲಭಿಸಿದೆ. ಎರಡೂ ಮಠಗಳ ನಡುವೆ ಉತ್ತಮ ಸಂಬಂಧವಿದ್ದು,ಇದು ಹೀಗೇಯೇ ವೃದ್ಧಿಯಾಗುತ್ತ ಸಾಗಲಿ ಎಂದು ನುಡಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ರಾಜ್ಯ ಲೊಕೋಪಯೋಗಿ ಸಚಿವ ದಿಗಂಬರ್ ಕಾಮತ್ ಮಾತನಾಡಿ- ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿ ರವರಿಗೆ ಪ್ರಭು ಶ್ರೀರಾಮನ ಮೇಲೆ ಅಪಾರ ಭಕ್ತಿಯಿದೆ. ಇದರಿಂದಾಗಿಯೇ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಮಠದ ಜೀಣೋಧ್ಧಾರ ಪೂರ್ಣಗೊಳಿಸಿ ತಮ್ಮ ಚಮತ್ಕಾರ ತೋರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪರ್ತಗಾಳಿ ಮಠದ ಅಧ್ಯಕ್ಷ ಶ್ರೀನಿವಾಸ್ ದೆಂಪೊ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಮಠದ ಜೀರ್ಣೋದ್ಧಾರಕ್ಕೆ ಸಹಾಯ ಸಹಕಾರ ನೀಡಿದ ಹಲವರ್ನು ಶ್ರೀಗಳು ಆಶೀರ್ವದಿಸಿದರು.
