ಸುದ್ಧಿಕನ್ನಡ ವಾರ್ತೆ
ಪಣಜಿ(ವಾಸ್ಕೊ): ಗೋವಾದ ವಾಸ್ಕೊ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಸಂಜೆ ಅಪ್ರಾಪ್ತ ಬಾಲಕಿಯನ್ನು ಅಪಹರಣ ನಡೆಸಿದ ಆತಂಕಕಾರಿ ಘಟನೆ ನಡೆದಿದೆ. ಮಹಿಳೆಯೋರ್ವಳು ತನ್ನ ಮಗಳು ಅಪಹರಣಕ್ಕೊಳಗಾಗಿದ್ದಾಳೆ ಎಂದು ವಾಸ್ಕೊ ರೈಲ್ವೆ ಪೋಲಿಸರಿಗೆ ದೂರು ಸಲ್ಲಿಸಿದ್ದಾಳೆ. ಪೋಲಿಸರು ಕೂಡಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯು ಗಂಭೀರವಾಗಿರುವ ಹಿನ್ನೆಲೆಯಲ್ಲಿ ಪೋಲಿಸರು ತಕ್ಷಣವೇ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯ ಪರಿಸರದ ಎಲ್ಲ ಮಾರ್ಗ, ಪ್ಲೈಟ್ ಮಾರ್ಗ, ಹೊರ ರಾಜ್ಯಗಳಿಗೆ ತೆರಳುವ ಗಡಿ ಚೆಕ್ ಪೋಸ್ಟ ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ. ಅಪರಿಚಿತ ವ್ಯಕ್ತಿಯೋರ್ವ ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಆಕೆಯ ತಾಯಿ ದೂರು ಸಲ್ಲಿಸಿದ್ದಾಳೆ.
ಈ ಭಾಗದ ಸಿಸಿಟಿವಿ ಕ್ಯಾಮರಾ, ಸ್ಥಳೀಯ ಅಟೊ ಚಾಲಕರಿಂದ ಹಾಗೂ ಸ್ಥಳೀಯ ಅಂಗಡಿ ಮಾಲೀಕರಿಂದ ಕೂಡ ಪೋಲಿಸರು ಅಗತ್ಯ ಮಾಹಿತಿಯನ್ನು ಕಲೆಹಾಕಿದ್ದಾರೆ. ಬಾಲಕಿಯನ್ನು ಸುರಕ್ಷಿತವಾಗಿ ಕರೆತರಬೇಕು ಎಂಬ ಉದ್ದೇಶದಿಂದ ಜನತೆ ಸಹಕಾರ ನೀಡಬೇಕು ಎಂದು ಪೋಲಿಸರು ಈ ಮೂಲಕ ಮನವಿ ಮಾಡಿದ್ದಾರೆ.
ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪಿಎಸ್ ಐ ಕೃಷ್ಣಾ.ಜಿ.ತಲಪಿ ರವರ ಬಳಿ ಒಪ್ಪಿಸಲಾಗಿದ್ದು ಅವರು ವಿವಿಧ ತಾಂತ್ರಿಕ ಹಾಗೂ ಸ್ಥಳೀಯ ಪುರಾವೆಗಳ ಆಧಾರದ ಮೇಲೆ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿ ತರಲು ತನಿಖೆ ಚುರುಕುಗೊಳಿಸಿದ್ದಾರೆ.
ಗೋವಾದಲ್ಲಿ ಹೆಚ್ಚುತ್ತಿರುವ ಅಪಹರಣ…!
ಗೋವಾದಲ್ಲಿ ಕಳೆದ ಸುಮಾರು 6 ತಿಂಗಳ ಅವಧಿಯಲ್ಲಿ ಅಪಹರಣ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿರುವುದು ಜನರಲ್ಲಿ ಭಯ ಹುಟ್ಟಿಸಿದೆ. ಕಳೆದ ಸುಮಾರು 6 ತಿಂಗಳಲ್ಲಿ ಸುಮಾರು 10 ಅಪ್ರಾಪ್ತ ಮಕ್ಕಳ ಅಪಹರಣ ನಡೆದಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ. ಆದರೆ ಸಂತಸದ ವಿಷಯವೆಂದರೆ ಈ ಎಲ್ಲ ಪ್ರಕರಣವನ್ನು ಬೇಧಿಸಿ ಮಕ್ಕಳನ್ನು ರಕ್ಷಿಸಿ ಕರೆತರುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಇದೀಗ ವಾಸ್ಕೊ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯಲ್ಲಿಯೂ ಕೂಡ ಪೋಲಿಸರು ತ್ವರಿತ ಕಾರ್ಯಾಚರಣೆ ಕ್ಗೈಗೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
