ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾಕನ್ನಡ ಸಮಾಜ ಪಣಜಿ ಸಂಸ್ಥೆಯು ಕಳೆದ 40 ವರ್ಷಗಳಿಂದ ಗೋವಾ ರಾಜಧಾನಿ ಪಣಜಿಯಲ್ಲಿ ಕನ್ನಡ ಭಾಷೆ,ಸಂಸ್ಕøತಿ ಉಳಿಸಿ ಬೆಳೆಸಲು ಸತತವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರಸಕ್ತ ಮಾಣಿಕ್ಯ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ಇದರ ಒಂದು ಭಾಗವಾಗಿ ಪಣಜಿಯ ಸುತ್ತಮುತ್ತಲು ಇರುವ ಕನ್ನಡಿಗರಿಗಾಗಿ ಉಚಿತ ಕನ್ನಡ ಕಲಿಕಾ ಕೇಂದ್ರ  (Kannada kalika kendra) ಆರಂಭಿಸಲು ಗೋವಾ ಕನ್ನಡ ಸಮಾಜ ಮುಂದಾಗಿದೆ.

ಗೋವಾದಲ್ಲಿರುವ ಬಹುಕೇತ ಕನ್ನಡಿಗರ ಮಕ್ಕಳಿಗೆ ಕನ್ನಡ ಬರೆಯಲು ಓದಲು ಕಷ್ಟವಾಗುತ್ತಿದೆ. ಕನ್ನಡ ಕಲಿಯುವ ಆಸಕ್ತಿ ಇರುವ ವಯೋವೃದ್ಧರೂ ಕೂಡ ಇದ್ದಾರೆ. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಗೋವಾ ಕನ್ನಡ ಸಮಾಜ ಪಣಜಿ ಕನ್ನಡ ಕಲಿಕಾ ಕೇಂದ್ರ ಆರಂಭಿಸುವ ಸಿದ್ಧತೆ ನಡೆಸಿದೆ. ಕನ್ನಡ ಕಲಿಕಾ ಕೇಂದ್ರದಲ್ಲಿ ಚಿಕ್ಕವರು ದೊಡ್ಡವರು ಎನ್ನದೆಯೇ ಯಾವುದೇ ವಯಸ್ಸಿನ ಇತಿಮಿತಿ ಇಲ್ಲದೆಯೇ ಕನ್ನಡ ಕಲಿಯಲು ಅವಕಾಶ ಲಭಿಸಲಿದೆ. ಶೀಘ್ರದಲ್ಲಿಯೇ ತರಗತಿಗಳು ಆರಂಭಗೊಳ್ಳಲಿದ್ದು ಪಣಜಿಯ ಸುತ್ತಮುತ್ತಲು ಇರುವ ಕನ್ನಡಿಗರು ಕನ್ನಡ ಕಲಿಕಾ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು. ಗೋವಾದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲೀಷ್ ಅಥವಾ ಕೊಂಕಣಿಯಲ್ಲಿ ಕಲಿತವರೂ ಕೂಡ ಕನ್ನಡ ಬರೆಯಲು ಓದಲು ಕಲಿಯುವ ಸದಾವಕಾಶ ಇದೀಗ ಬಂದೊದಗಿದೆ. ಈ ಕುರಿತಂತೆ ಗೋವಾ ಕನ್ನಡ ಸಮಾಜದ ಅಧ್ಯಕ್ಷರಾದ ಅರುಣಕುಮಾರ್ ಮಾಹಿತಿ ನೀಡಿದ್ದಾರೆ.

ಗೋವಾದಲ್ಲಿ 3 ಲಕ್ಷಕ್ಕೂ ಹೆಚ್ಚು ಕನ್ನಡಿಗರು ವಾಸಿಸುತ್ತಿದ್ದು, ಬಹುತೇಕ ಕನ್ನಡಿಗರಿಗೆ ಕನ್ನಡ ಮಾತನಾಡಲು ಬರುತ್ತದೆಯೇ ಹೊರತು ಓದಲು ಬರೆಯಲು ಬರುವುದಿಲ್ಲ. ಇಲ್ಲಿ ಬಂದು ನೆಲೆಸಿದ ಕನ್ನಡಿಗರ ಮಕ್ಕಳಿಗೂ ಕೂಡ ಇದೇ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಕನ್ನಡ ಕಲಿಕಾ ಕೇಂದ್ರ ಪಣಜಿಯಲ್ಲಿ ಆರಂಭಗೊಳ್ಳುತ್ತಿರುವುದರಿಂದ ಕನ್ನಡಿಗರು ನಮ್ಮ ಭಾಷೆ ಉಳಿಸಿ ಬೆಳೆಸಲು ಇನ್ನಷ್ಟು ಸಹಕಾರಿಯಾಗಲಿದೆ. ಕನ್ನಡ ಕಲಿಕೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಎಷ್ಟು ತರಗತಿ ನಡೆಸಬೇಕು..? ಎಂಬಿತ್ಯಾದಿ ನಿರ್ಣಯ ತೆಗೆದುಕೊಳ್ಳಲು ಗೋವಾ ಕನ್ನಡ ಸಮಾಜ ಸಭೆಯಲ್ಲಿ ನಿರ್ಧರಿಸಿದೆ. ತರಗತಿಗೆ ಸೇರಲು ಯಾವುದೇ ವಯಸ್ಸಿನ ನಿರ್ಬಂಧವಿಲ್ಲ, ಬಹುಮುಖ್ಯವಾಗಿ ಕನ್ನಡ ಕಲಿಯುವ ಆಸಕ್ತಿ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ -9890912106 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.