ಸುದ್ಧಿಕನ್ನಡ ವಾರ್ತೆ
ಪಣಜಿ(ಪೆಡ್ನೆ): ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ 63 ದಿನಗಳ ಕಾಲ ದಾಂಧಲೆ ಎಬ್ಬಿಸಿ ಮತ್ತೆ ಗೋವಾಕ್ಕೆ ಬಂದ “ಓಂಕಾರ” ಆನೆಯು (Omkar Elephant) ಗೋವಾದ ಪೆಡ್ನೆ ತಾಲೂಕಿನ ಪತ್ರಾದೇವಿ,ಫಕೀರ್ ಫಾಟಾ, ಪರಿಸರದಲ್ಲಿ ಕೃಷಿ ಕ್ಷೇತ್ರವನ್ನು ಧೂಳಿಪಟವೆಬ್ಬಿಸಿದೆ. ಸೋಮವಾರ ಬೆಳಗಿನ ಜಾವ ಇಲ್ಲಿನ ಹರಿಜನವಾಡಾ-ಪಂಚಶೀಲಾ ನಗರದ ಮುಖ್ಯ ರಸ್ತೆಯಲ್ಲಿ ಬಂದು ನಿಂತಿದ್ದರಿಂದ ವಿದ್ಯಾರ್ಥಿಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಇಲ್ಲಿನ ಶಾಲೆಗೆ ಸುಮಾರು 17 ವಿದ್ಯಾರ್ಥಿಗಳು ಗೈರಾದ ಘಟನೆ ಕೂಡ ನಡೆದಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಓಂಕಾರ ಆನೆಯು ಜನವಸತಿ ಪ್ರದೇಶಕ್ಕೆ ಬಾರದಂತೆ ನೋಡಿಕೊಳ್ಳಲು ಹಲವು ಸಿದ್ಧತೆಯನ್ನು ನಡೆಸಿದ್ದಾರೆ. ಓಂಕಾರ ಆನೆಯು ಸೋಮವಾರ ಬೆಳಗಿನ ಜಾವ ಪೆಡ್ನೆ ಭಾಗದಲ್ಲಿ ನಾಲ್ಕು ಜನ ಕೃಷಿಕರ ಗದ್ದೆಯನ್ನು ಧೂಳಿಪಟವೆಬ್ಬಿಸಿದೆ.
ಮಹಾರಾಷ್ಟ್ರದ ಸಿಂದುದುರ್ಗ ಜಿಲ್ಲೆಯಲ್ಲಿ ಕಳೆದ 63 ದಿನಗಳ ಕಾಲ ಓಂಕಾರ ಆನೆಯು(Omkar Elephant) ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ದೌಂಸಗೊಳಿಸಿದೆ. ಇದರಿಂದಾಗಿ ಹಲವು ಜನ ಕೃಷಿಕರು ಭಾರಿ ನಷ್ಠ ಅನುಭವಿಸಿದ್ದಾರೆ. ಸಿಂದುದುರ್ಗದಲ್ಲಿ ಹಲವರು ಓಂಕಾರ ಆನೆಯ ದಾಂಧಲೆಯ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಭಾರಿ ವೈರಲ್ ಕೂಡ ಆಗಿದೆ. ಈ ಎಲ್ಲ ದೃಶ್ಯವನ್ನು ಕಂಡ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯಪಡುತ್ತಿದ್ದಾರೆ.
ಇಲ್ಲಿನ ವಿದ್ಯಾರ್ಥಿ ಪ್ರೇಮ್ ತೋರಸ್ಕರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ- ನಾನು ಇಂದು ಬೆಳಿಗ್ಗೆ ಶಾಲೆಗೆ ತೆರಳಲು ಸಿದ್ಧನಾಗಿದ್ದೆ. ಅಷ್ಟುಹೊತ್ತಿಗಾಗಲೇ ಓಂಕಾರ ಆನೆ ಬರುತ್ತಿದೆ ಎಂದು ರಸ್ತೆಯಲ್ಲಿ ಜನ ಓಡುತ್ತಿದ್ದರು. ಆದರೆ ಆನೆಯು ಹೊಲ ಗದ್ದೆಗೆ ನುಗ್ಗಿತು. ಇದರಿಂದಾಗಿ ನಮಗೆ ಶಾಲೆಗೆ ಹೋಗಲು ಭಯವುಂಟಾಗುತ್ತಿದೆ ಎಂದರು.
