Goa: ನಿಮ್ಮ ಹೆಸರಲ್ಲಿ ಪಾರ್ಸಲ್ (Parcel Scam) ಬಂದಿದೆ, ಇದನ್ನು ಪಡೆದುಕೊಳ್ಳಲು ನಿಮಗೆ ಕಳುಹಿಸಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 25 ರೂ ಶುಲ್ಕ ಭರಿಸಿ, ಪಾರ್ಸಲ್ ಮನೆಗೆ ತಲುಪಿಸುತ್ತೇವೆ ಎಂದು ಮೊಬೈಲ್ ಗೆ ಬಂದಿದ್ದ ಮೆಸೇಜ್ ನೋಡಿ ವ್ಯಕ್ತಿಯೋರ್ವ 25 ರೂ ಭರಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿದ. ಮೊಬೈಲ್ ಗೆ ಬಂದ OTP ಯನ್ನು ಅಲ್ಲಿ ತುಂಬಿದ. ಕೆಲವೇ ನಿಮಿಷದಲ್ಲಿ ಈ ವ್ಯಕ್ತಿಯ ಕ್ರೆಡಿಟ್ ಕಾರ್ಡನಲ್ಲಿದ್ದ (credit card ) ಎಲ್ಲ ಹಣ ಡ್ರಾ ಆಗಿರುವ ಕುರಿತಂತೆ ಮೆಸೇಜ್ ಬಂತು ಎನ್ನಲಾಗಿದೆ.

ಗೋವಾ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಸ್ಕ್ಯಾಮ್  SCAM ನಿಂದಾಗಿ ಎಲ್ಲರಲ್ಲಿ ಆತಂಕ ನಿರ್ಮಾಣವಾಗಿದೆ. ಇದು ಒಂದೇ ಘಟನೆಯಲ್ಲ. ಇಂತಹ ಎರಡು ಘಟನೆ ನಡೆದಿರುವ ಕುರಿತಂತೆ ದಾಖಲಾಗಿದೆ.ಮೊದಲ ಘಟನೆಯಲ್ಲಿ ವ್ಯಕ್ತಿಯು 25,782 ರೂ ಗಳನ್ನು ಕಳೆದುಕೊಂಡಿದ್ದಾನೆ. ಮತ್ತೊಂದು ಘಟನೆಯಲ್ಲಿ ಇನ್ನೋರ್ವವ್ಯಕ್ತಿ 85,238 ರೂಗಳನ್ನು ಕಳೆದುಕೊಂಡಿದ್ದಾನೆ.

ಗೋವಾ ರಾಜ್ಯದಲ್ಲಿ ನಕಲಿ ಪಾರ್ಸಲ್ ಡಿಲೆವರಿ (Parcel delivery) ಮೆಸೇಜ್ ನಿಂದ ನಡೆಸಲಾಗುವ ಸೈಬರ್ ಅಪರಾಧಗಳ (Cyber ​​crime) ಸಂಖ್ಯೆ ಹೆಚ್ಚುತ್ತಿದೆ. ಕೋರಿಯರ್ ಸೇವೆ, ಪೋಸ್ಟ, ಅಥವಾ ಲಾಜಿಸ್ಟಿಕ್ ಕಂಪನಿಗಳ ಹೆಸರಿನಲ್ಲಿ ಕಳುಹಿಸಲಾಗುವ ಇಂತಹ ಮೆಸೇಜ್ ಗಳು ಸಂಪೂರ್ಣ ನಕಲಿ ಮೆಸೇಜ್ ಗಳಾಗಿವೆ. ಸ್ವಲ್ಪವೇ ಹಣ ತುಂಬಿಸಿಕೊಳ್ಳುವ ಆಮಿಷವೊಡ್ಡಿ ಜನರ ಹಣವನ್ನು ಬ್ಯಾಂಕ್ ಖಾತೆಯಿಂದ  (Bank account) ಲೂಟಿ ಮಾಡಲಾಗುತ್ತಿದೆ. ಗೋವಾ ರಾಜ್ಯದಲ್ಲಿ ಇದೀಗ ನಡೆದಿರುವ ಈ ಎರಡು ಘಟನೆಗಳಿಂದ ಆತಂಕದ ವಾತಾವರಣ ಸೃಷ್ಠಿಯಾಗಿದೆ. ಸೈಬರ್ ಅಪರಾಧಿಗಳು ಕಳುಹಿಸುವ ಇಂತಹ ಲಿಂಕ್ ಗಳು ಸಂಪೂರ್ಣ ಸತ್ಯ ಎಂದು ನಂಬುವಂತೆಯೇ ಇರುತ್ತದೆ, ಇದರಿಂದಾಗಿ ಜನತೆ ಮೋಸಕ್ಕೊಳಗಾಗುತ್ತಿದ್ದಾರೆ.

ಸೈಬರ್ ಪೋಲಿಸರು (Cyber ​​police) ನೀಡಿರುವ ಮಾಹಿತಿಯ ಅನುಸಾರ- ಇಂತಹ ಪ್ರಕರಣಗಳಲ್ಲಿ ನೀಡಲಾಗುವ ಎಲ್ಲ ಮಾಹಿತಿಗಳು ಸಂಪೂರ್ಣ ಸುಳ್ಳು ಮಾಹಿತಿಯಾಗಿರುತ್ತದೆ. ಲಿಂಕ್ ಕ್ಲಿಕ್ ಮಾಡಿ OTP ನೀಡಿದರೆ ಸಾಕು ನಿಮ್ಮ ಬ್ಯಾಂಕ್ ಖಾತೆಯ ಹಣ ದೋಚುತ್ತಾರೆ. ಇಂತಹ ಲಿಂಕ್ ಗಳು ಮೊಬೈಲ್ ಗೆ ಬಂದರೆ ಇವುಗಳನ್ನು ಕೂಡಲೇ ಕ್ಲಿಕ್ ಮಾಡಬೇಡಿ, ಯಾವುದೇ ಹಣ ಹಾಕಬೇಡಿ.  OTP ಅಥವಾ  UPI   Pin ನೀಡಬೇಡಿ. ಯಾವುದೇ ಲಿಂಕ್ ಬಗ್ಗೆ ಸಂಶಯ ಕಂಡುಬಂದರೆ ಅಗತ್ಯ ಪರಿಶೀಲನೆ ನಡೆಸಿ ಎಂದು ಪೋಲಿಸರು ಜನತೆಯ ಬಳಿ ಮನವಿ ಮಾಡಿದ್ದಾರೆ. ಇಂತಹ ಯಾವುದೇ ಮೋಸಕ್ಕೊಳಗಾದರೆ ಕೂಡಲೆ 1930 ಈ ಹೆಲ್ಪಲೈನ್ ನಂಬರ್ ಕೂಡಲೇ ಸಂಪರ್ಕಿಸಿ ಎಂದು ಪೋಲಿಸರು ಮನವಿ ಮಾಡಿದ್ದಾರೆ.