ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯ ಜಿಲ್ಲಾ ಪಂಚಾಯತ ಚುನಾವಣೆಯ (Goa Z.P Election) ವೇಳಾಪಟ್ಟಿ ಪ್ರಕಟವಾಗಿದೆ. ಡಿಸೆಂಬರ್ 20 ರಂದು ಗೋವಾ ರಾಜ್ಯದ 50 ಜಿಲ್ಲಾ ಪಂಚಾಯತ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 1 ರಿಂದ 9 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಹಿಂಪಡೆಯಲು ಡಿಸೆಂಬರ್ 11 ಕೊನೇಯ ದಿನಾಂಕವಾಗಿದ್ದು ಡಿಸೆಂಬರ್ 22 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಶನಿವಾರದಿಂದಲೇ ನೀತಿಸಂಹಿತೆ ಜಾರಿಯಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಮಜಿನಿನ್ ಡಿಸೋಜಾ ಮಾಹಿತಿ ನೀಡಿದ್ದಾರೆ.
ಪಣಜಿಯ ಅಲ್ತಿನೊದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. ಡಿಸೆಂಬರ್ 10 ರಂದು ಬೆಳಿಗ್ಗೆ 10 ಗಂಟೆಯಿಂದ ನಾಮಪತ್ರ ಪರಿಶೀಲನೆ ನಡೆಯಲಿದೆ. ಡಿಸೆಂಬರ್ 11 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾನ್ಹ 2 ಗಂಟೆಯವರೆಗೆ ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆಯಬಹುದಾಗಿದೆ. ಅದೇ ದಿನ ಮಧ್ಯಾನ್ಹ 2 ಗಂಟೆಯ ನಂತರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಡಿಸೆಂಬರ್ 20 ರಂದು ಬೆಳಿಗ್ಗೆ 8 ರಿಂದ ಮತದಾನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 22 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯುಕ್ತರು ಮಾಹಿತಿ ನೀಡಿದರು.
ಚುನಾವಣೆ ಶಾಂತಿಯುತವಾಗಿ ನಡೆಯಲು ಪೋಲಿಸ್ ಇಲಾಖೆಯು ಹೆಚ್ಚುವರಿ ಪೋಲಿಸ್ ಪಡೆಯನ್ನು ನಿಯೋಜಿಸಲಿದೆ. ಅಭ್ಯರ್ಥಿಗಳು ಗರಿಷ್ಠ 5 ಲಕ್ಷ ಖರ್ಚು ಮಾಡಲು ಅವಕಾಶವಿದೆ. ಮತಪತ್ರಗಳ ಮೂಲಕ ಮತದಾನ ಪ್ರಕ್ರಿಯೆ ನಡೆಯಲಿದೆ. ಗೋವಾದ ಜಿಲ್ಲಾಪಂಚಾಯತ ಪ್ರದೇಶಗಳಲ್ಲಿ ಶನಿವಾರದಿಂದ ನೀತಿ ಸಂಹಿತೆ ಜಾರಿಯಾಗಿದೆ. ಆದರೆ ಪಣಜಿ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಪುರಸಭೆ ಪ್ರದೇಶಗಳಲ್ಲಿ ನೀತಿಸಂಹಿತೆ ಅನ್ವಯಿಸುವುದಿಲ್ಲ. ಎಂದು ಚುನಾವಣಾ ಆಯುಕ್ತ ಡಿಸೋಜಾ ರವರು ಮಾಹಿತಿ ನೀಡಿದರು.
