ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ): ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಮಠದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರು 77 ಅಡಿ ಎತ್ತರದ ಶ್ರೀರಾಮನ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಿದ ನಂತರ ಮಠಕ್ಕೆ ತೆರಳಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಪ್ರಧಾನಿಗಳು ಮಠದ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರಿಂದ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಪರ್ತಗಾಳಿ ಮಠದ ಸ್ವಚ್ಛತೆ ಬಗ್ಗೆ ಹೆಮ್ಮೆ….
ಶ್ರೀಗೋಕರ್ಣ ಪರ್ತಗಾಳಿ ಮಠವು 550 ನೇಯ ವರ್ಷದ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಕೆಲ ಹೊಸ ಕಟ್ಟಡ ಸೇರಿದಂತೆ ಮಠದ ಪ್ರಮುಖ ಸ್ಥಳಗಳನ್ನು ನವೀಕರಣಗೊಳಿಸಲಾಗಿದೆ. ಮಠದ ಸುತ್ತ ಹಾಗೂ ಮುಂಭಾಗದಲ್ಲಿ ಕಾವಿ ಕಲೆ ಆಕರ್ಷಣೀಯವಾಗಿದೆ. ಮರದ ಕೆತ್ತನೆಯಂತೂ ಅತಿ ಸುಂದರವಾಗಿದೆ. ಈ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಪ್ರಧಾನಿಗಳು ತಮ್ಮ ಭಾಷಣದಲ್ಲಿ ಪರ್ತಗಾಳಿ ಮಠದ ಸ್ವಚ್ಛತೆಯ ಬಗ್ಗೆ ಹಾಡಿ ಹೊಗಳಿದ್ದಾರೆ.
ದೇವರ ದರ್ಶನಕ್ಕೆ ಮಠಕ್ಕೆ ತೆರಳಿದ್ದ ಸಂದರ್ಭದಲ್ಲಿ ಇಲ್ಲಿನ ಸ್ವಚ್ಛತೆಯನ್ನು ಗಮನಿಸಿದ್ದೇನೆ ಎಂದು ಕೂಡ ಪ್ರಧಾನಿಗಳು ತಮ್ಮ ಭಾಷಣದಲ್ಲಿ ಹೇಳಿರುವುದು ವಿಶೇಷ ಮತ್ತು ಇದು ಹೆಮ್ಮೆಯ ವಿಷಯ. ಪ್ರಧಾನಿಗಳು ಮಠದ ಸ್ವಚ್ಛತೆಯ ಬಗ್ಗೆ ಹೇಳಿರುವುದು ಪರ್ತಗಾಳಿ ಮಠವು ಒಂದು ಮಾದರಿ ಎಂಬಂತಿದೆ.
