ಸುದ್ಧಿಕನ್ನಡ ವಾರ್ತೆ
ಪಣಜಿ: ಶುಕ್ರವಾರ ಸಂಜೆ ಪಣಜಿ ಸಮೀಪದ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂ ನಲ್ಲಿ 56 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಕನ್ನಡದ ಗಂಡುಮೆಟ್ಟಿದ ಕಲೆ ಎಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನ ಪ್ರಸಂಗವೊಂದರ ತುಣುಕನ್ನು ಪ್ರದರ್ಶಿಸಲಾಯಿತು. ಈ ಮೂಲಕ ಯಕ್ಷಗಾನ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ವೇದಿಕೆಯಲ್ಲಿ ಪ್ರದರ್ಶನಗೊಂಡಿದೆ.

ಕಾಂತಾರ ಚಲನಚಿತ್ರ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ರವರಿಗೆ ಯಕ್ಷಗಾನ ಕಲಾವಿದರ ಮೂಲಕ ಯಕ್ಷಗಾನ ಕಿರೀಟ ತೊಡಿಸಿ ಕರ್ನಾಟಕದ ರಾಜ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಮಾತನಾಡಿ-ಸೂಪರ್ ಸ್ಟಾರ್ ರಜನೀಕಾಂತ್ ರವರು ಚಲನಚಿತ್ರ ಕ್ಷೇತ್ರದಲ್ಲಿ 50 ವರ್ಷ ಜರ್ನಿ ಪೂರ್ಣಗೊಳಿಸಿದ್ದೀರಿ ಇದಕ್ಕಾಗಿ ನಿಮಗೆ ಅಭಿನಂದನೆ. ನಾವು ಕೂಡ ಫಿಲ್ಮ ಇಂಡಸ್ಟೀಗೆ ಬಂದಿದ್ದೇವೆ ನಿಮ್ಮ ದಾರಿಯಲ್ಲಿ ನಡೆದುಕೊಂಡು ಹೋಗಲು. ಇನ್ನೂ ಹೆಚ್ಚು ಭಾರತೀಯ ಸಿನೆಮಾಗೆ ನಿಮ್ಮ ಕೊಡುಗೆ ನೀಡುವಂತಾಗಲಿ ಎಂದು ಸೂಪರ್ ಸ್ಟಾರ್ ರಜನೀಕಾಂತ್ ರವರನ್ನು ಅಭಿನಂದಿಸಿದರು.
ನಾನು 6 ನೇಯ ತರಗತಿಯಲ್ಲಿದ್ದಾಗಿನಿಂದ ನನ್ನ ಕಲೆಯ ಜೀವನ ಯಕ್ಷಗಾನ ಕಲೆಯಿಂದಲೇ ಆರಂಭಗೊಂಡಿತ್ತು. ಯಕ್ಷಗಾನ ಕಲೆಯನ್ನು ಸಾವಿರಾರು ವರ್ಷಗಳ ಹಿಂದಿನಿಂದ ಪ್ರದರ್ಶನಗೊಳ್ಳುತ್ತಿರುವ ಕಲೆ. ಇಂದಿಗೂ ಕೂಡ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನಡೆಯುತ್ತದೆ. ನನ್ನ ಚಲನಚಿತ್ರದಲ್ಲಿಯೂ ಇಂತಹ ಕಲೆಯನ್ನು ತೆಗೆದುಕೊಂಡು ಬರುತ್ತೇನೆ ಎಂದು ರಿಷಬ್ ಶೆಟ್ಟಿ ನುಡಿದರು.

50 ವರ್ಷ ಚಲನಚಿತ್ರ ಕ್ಷೇತ್ರದ ಸೇವೆಯನ್ನು ಗುರುತಿಸಿ ಸೂಪರ್ ಸ್ಟಾರ್ ರಜನೀಕಾಂತ್ ರವರಿಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸರಣ ಖಾತೆಯ ಸಚಿವ ಎಲ್.ಮುರುಗನ್, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸೇರಿದಂತೆ ದೇಶ-ವಿದೇಶಗಳಿಂದ ಆಗಮಿಸಿದ್ದ ಚಲನಚಿತ್ರ ಕ್ಷೇತ್ರದ ದಿಗ್ಗಜರು, ಪ್ರತಿನಿಧಗಳು ಉಪಸ್ಥಿತರಿದ್ದರು.