ಸುದ್ಧಿಕನ್ನಡ ವಾರ್ತೆ

ಪಣಜಿ(ಕಾಣಕೋಣ): ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಮಠದ 550 ನೇಯ ವರ್ಧಂತಿ ಉತ್ಸವದ ಅಂಗವಾಗಿ ಮಠದ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ (77 ಅಡಿ ಎತ್ತರ) ಶ್ರೀರಾಮನ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ರವರು ನವೆಂಬರ್ 28 ರಂದು ಮಧ್ಯಾನ್ಹ 4 ಗಂಟೆಗೆ ಅನಾವರಣಗೊಳಿಸಲಿದ್ದಾರೆ.

ಶುಕ್ರವಾರ ಮಧ್ಯಾನ್ಹ 3.45 ಕ್ಕೆ ಪ್ರಧಾನಿ ನರೇಂದ್ರ ಮೋದಿ ರವರು ಹೆಲಿಕ್ಯಾಪ್ಟರ್ ಮೂಲಕ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠಕ್ಕೆ ಆಗಮಿಸಲಿದ್ದಾರೆ. ಮಧ್ಯಾನ್ಹ 4 ಗಂಟೆಗೆ ಪ್ರಧಾನಿಗಳು 77 ಅಡಿ ಎತ್ತರದ ಶ್ರೀರಾಮನ ಮೂರ್ತಿ ಹಾಗೂ 7ಡಿ ಥಿಯೇಟರ್ ಯೋಜನೆಯ ಉಧ್ಘಾಟನೆ ನೆರವೇರಿಸಲಿದ್ದಾರೆ. ನಂತರ ಪ್ರಧಾನಿಗಳು ಶ್ರೀರಾಮ ದೇವ, ಶ್ರೀ ವೀರ ವಿಠ್ಠಲ, ದೇವ ಶ್ರೀವಾಸುದೇವ, ಶ್ರೀ ವೆಂಕಟೇಶ್ವರ, ಶ್ರೀ ವೇದವ್ಯಾಸ, ಶ್ರೀಲಕ್ಷ್ಮೀನಾರಾಯಣ ದೇವರ ದರ್ಶನ ಪಡೆದುಕೊಳ್ಳಲಿದ್ದಾರೆ.

ಶ್ರೀಮಠದಲ್ಲಿ ದೇವರ ದರ್ಶನ ಪಡೆದ ನಂತರ ಪ್ರಧಾನಿಗಳು ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಠದ 550 ನೇಯ ವರ್ಷದ ವರ್ಧಂತಿ ಉತ್ಸವದ ನಿಮಿತ್ತ ವಿಶೇಷ ಪೋಸ್ಟ ಕಾರ್ಡನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಲಿದ್ದಾರೆ ಹಾಗೂ ಮಠದ ಬೋಧ ಚಿನ್ಹೆ ಇರುವ ನಾಣ್ಯವನ್ನು ಪ್ರಧಾನಿಗಳು ಬಿಡುಗಡೆಗೊಳಿಸಲಿದ್ದಾರೆ.

ಭಾರಿ ವಾಹನಗಳಿಗೆ ನಿರ್ಬಂಧ…
ಪರ್ತಗಾಳಿ ಮಠದ ಕಾರ್ಯಕ್ರಮದಲ್ಲಿ ಶುಕ್ರವಾರ ಅತಿ ಮಹನೀಯ ವ್ಯಕ್ತಿಗಳು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಕಾಣಕೋಣ-ಮಡಗಾಂವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಕಾಣಕೋಣ ಪರಿಸರದಲ್ಲಿರುವ ಎಲ್ಲ ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳು ಮಧ್ಯಾನ್ಹ 1.30 ರ ಒಳಗೆ ಮಠದ ಪ್ರವೇಶದ್ವಾರದ ಬಳಿ ಆಗಮಿಸಬೇಕು ಅಲ್ಲಿಂದ ಮಠಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನ ಸಮೀತಿ ಮಾಹಿತಿ ನೀಡಿದೆ.

ಪ್ರಧಾನಿಗಳ ಆಗಮನದ ಹಿನ್ನೆಲೆಯಲ್ಲಿ ಬಧ್ರತೆ ಹೆಚ್ಚಳ…
ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿಯವರು ಪರ್ತಗಾಳಿ ಮಠಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಅಧಿಕ ಕಟ್ಟೆಚ್ಚರ ವಹಿಸಲಾಗಿದೆ. ಹಿರೀಯ ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿಯೇ ಮುಕ್ಕಾಂ ಹೂಡಿದ್ದು ಅಧಿಕ ಭಧ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಹಿರಿಯ ಪೋಲಿಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪರ್ತಗಾಳಿ ಮಠಕ್ಕೆ ಆಗಮಿಸಿ ಭಧ್ರತೆ ಪರಿಶೀಲನೆ ನಡೆಸಿದ್ದಾರೆ.

ಶ್ರೀಗಳಿಂದ ಸಿದ್ಧತೆ ಪರಿಶೀಲನೆ…
ಶ್ರೀಗೋಕರ್ಣ ಪರ್ತಗಾಳಿ ಮಠದ 550 ನೇಯ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಬೃಹತ್ ಸಭಾ ವೇದಿಕೆ ಸಿದ್ಧಗೊಂಡಿದೆ, ಅಂತೆಯೇ ಏಷ್ಯಾದಲ್ಲಿಯೇ ಅತಿ ಎತ್ರದ ಶ್ರೀರಾಮನ ಮೂರ್ತಿ ನಿರ್ಮಾಣ ಕಾರ್ಯವೂ ಕೂಡ ಪೂರ್ಣಗೊಂಡಿದೆ. ಗುರುವಾರ ಮಠದ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರು ಖುದ್ದಾಗಿ ತೆರಳಿ ಸಿದ್ಧಾತಾ ಕಾರ್ಯಗಳ ಪರಿಶೀಲನೆ ನಡೆಸಿ ಸಮೀತಿಗೆ ಅಗತ್ಯ ಸೂಚನೆಯನ್ನೂ ನೀಡಿದರು.