ಸುದ್ದಿ ಕನ್ನಡ ವಾರ್ತೆ
ಪಣಜಿ(ಮಡಗಾಂವ): ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 28 ರಂದು ಗೋವಾಕ್ಕೆ ಆಗಮಿಸುತ್ತಿದ್ದು ಈ ಹಿನ್ನೆಲೆಯಲ್ಲಿ ದಕ್ಷಿಣ ಗೋವಾ ಜಿಲ್ಲಾಧಿಕಾರಿಗಳು ಇಡೀ ಜಿಲ್ಲೆಯಲ್ಲಿ ರಸ್ತೆ ಅಗೆಯುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಿದ್ದಾರೆ.
ವಿಐಪಿ ಗಳ ವಾಹನ ಸಂಚಾರಕ್ಕೆ ಯಾವುದೇ ಅಡಚಣಿ ಉಂಟಾಗಬಾರದು ಹಾಗೂ ಅತ್ಯಾವಶ್ಯಕ ಸೇವೆಯಲ್ಲಿ ಯಾವುದೇ ಕೊರತೆ ಉಂಟಾಗಬಾರದು ಎಂದು ಜಿಲ್ಲಾಧಿಕಾರಿಗಳು ಕಠಿಣ ಆದೇಶ ಹೊರಡಿಸಿದ್ದಾರೆ. ಈ ಆದೇಶವು ನವೆಂಬರ್ 28 ರವರೆಗೆ ಇರಲಿದೆ.
ದಕ್ಷಿಣ ಗೋವಾದಲ್ಲಿ ಈಗಾಗಲೇ ರಸ್ತೆಯ ಅಗೆಯುವ ಕಾರ್ಯ ನಡೆಯುತ್ತಿದ್ದರೆ ಅದನ್ನು ಕೂಡಲೇ ಮೂಲ ಸ್ಥಿತಿಯಲ್ಲಿ ದುರಸ್ತಿಗೊಳಿಸಬೇಕು. ಈ ಆದೇಶವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ದಕ್ಷಿಣ ಗೋವಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಯಾವುದೇ ಏಜನ್ಸಿಗಳು ರಸ್ತೆ ಅಗೆಯುವ ಸಂದರ್ಭದಲ್ಲಿ ಬಿಎಸ್ ಎನ್ ಎಲ್ ಕೇಬಲ್ ತುಂಡಾಗಿರುವ ಸಾಧ್ಯತೆಯಿರುತ್ತದೆ. ಪ್ರಧಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅತ್ಯಾವಶ್ಯಕ ಸೇವೆಗಳ್ಲೊಂದಾದ ದೂರಸಂಚಾರ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ಆದೇಶವನ್ನು ಎಲ್ಲರೂ ಖಡ್ಡಾಯವಾಗಿ ಪಾಲನೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಗೂ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಯಾರೇ ಈ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಗೋವಾದಲ್ಲಿ ಬಿಗಿ ಭದ್ರತೆ
ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗೋವಾದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕಾಣಕೋಣದಿಂದ ಮಡಗಾವ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾರಿ ವಾಹನಕ್ಕೆ ಶುಕ್ರವಾರ ನಿಷೇಧ ಹೇರಲಾಗಿದೆ. ಪ್ರಧಾನಿಗಳ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
