ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ): ಗೋವಾ ಕಾಣಕೋಣದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಮಠದ 550 ನೇಯ ವರ್ಧಂತಿ ಉತ್ಸವ ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಠಕ್ಕೆ ಸಾಗರೋಪಾದಿಯಲ್ಲಿ ಭಕ್ತಾದಿಗಳು ದೇಶದ ಮೂಲೆ ಮೂಲೆಯಿಂದ ಮಶತ್ರವಲ್ಲದೆಯೇ ವಿದೇಶಗಳಿಂದಲೂ ಭಕ್ತಾದಿಗಳು ಆಗಮಿಸಲಿದ್ದಾರೆ. ಮಠದ ನಿರೀಕ್ಷೆಗಿಂತಲೂ ದುಪ್ಪಟ್ಟು ಹೆಚ್ಚು ಭಕ್ತಾದಿಗಳು ಆಗಮಿಸುವ ಸಾಧ್ಯತೆಯಿದ್ದು ಮಠದ ಸಮೀತಿಯು ಆಗಮಿಸುವ ಎಲ್ಲ ಭಕ್ತರಿಗೆ ಊಟ,ವಸತಿ ಲಭಿಸುವಂತೆ ನೋಡಿಕೊಳ್ಳಲು ಹೆಚ್ಚಿನ ಸಿದ್ಧತೆ ಮಾಡಿಕೊಂಡಿದೆ.

ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುಮಾರು 400 ಕ್ಕೂ ಹೆಚ್ಚು ಜನ ವೈದಿಕರು ಆಗಮಿಸುತ್ತಿದ್ದು ಇವರೆಲ್ಲರಿಗೂ ಮಠದಲ್ಲಿಯೇ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಗಮಿಸುವ ಭಕ್ತರಿಗೆ ಕಾಣಕೋಣದ ಮಠದ ಸಮೀಪವೇ ಬೃಹತ್ ಪೆಂಡಾಲ್ ಹಾಕಿ ಅಲ್ಲಿ ಡಾಲಮೆಟ್ರಿ ರೀತಿಯಲ್ಲಿ ಬೆಡ್, ಹಾಸಿಗೆ ಹಾಕಿ ಬೃಹತ್ ರೀತಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಪರ್ತಗಾಳಿಯ ಕೆಲವೇ ಕಿಮಿ ದೂರದಲ್ಲಿರುವ ಕಾಣಕೋಣದಲ್ಲಿರುವ ಬಹುತೇಕ ಎಲ್ಲ ಹೋಟೆಲ್ ರೂಂ ಗಳನ್ನು ಪರ್ತಗಾಳಿ ಮಠವು ಭಕ್ತಾದಿಗಳ ವಸತಿ ವ್ಯವಸ್ಥೆಗೆ ಕೆಲ ತಿಂಗಳ ಮುಂಚಿತವಾಗಿದೆ ಬುಕಿಂಗ್ ಮಾಡಿದೆ. ಕಾಣಕೋಣದಲ್ಲಿ ಹೋಟೆಲ್ ನಲ್ಲಿ ಉಳಿದುಕೊಳ್ಳುವ ಭಕ್ತರಿಗೆ ಮಠಕ್ಕೆ ಬಂದು ಹೋಗಲು ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಇನ್ನೂ ಅಗತ್ಯ ಬಿದ್ದರೆ ಸಮೀಪವೇ ಇರುವ ಕಾರವಾರದಲ್ಲಿ ಭಕ್ತರಿಗೆ ವಸತಿಗೆ ರೂಂ ವ್ಯವಸ್ಥೆ ಮಾಡಲು ಶ್ರೀಮಠ ಸಮೀತಿಯು ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಠದಲ್ಲಿ ಪ್ರತಿದಿನ ಆಗಮಿಸುವ ಭಕ್ತಾದಿಗಳಿಗೆ ಬೆಳಿಗ್ಗೆ ಉಪಹಾರ, ಮಧ್ಯಾನ್ಹ ಭೋಜನ ಹಾಗೂ ಸಂಜೆ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪರ್ತಗಾಳಿ ಮಠಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಮಠದಿಂದ ಸ್ವಲ್ಪ ದೂರದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಮಠಕ್ಕೆ ಆಗಮಿಸಲು ಕೂಡ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಮಠ ಸಮೀತಿ ಮಾಹಿತಿ ನೀಡಿದೆ.

ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದು ಭಧ್ರತಾ ದೃಷ್ಠಿಯಿಂದ ಸಹಕರಿಸಬೇಕು. ಕಾರ್ಯಕ್ರಮ ಮುಗಿದ ನಂತರ ಹೊರಡಲು ಗಡಿಬಿಡಿ ಮಾಡದೆಯೇ ಹಂತ ಹಂತವಾಗಿ ತೆರಳುವಂತೆಯೂ ಮಠ ಸಮೀತಿಯು ಭಕ್ತಾದಿಗಳಲ್ಲಿ ಮನವಿ ಮಾಡಿದೆ. ಮಠದ ವಸತಿ ವ್ಯವಸ್ಥೆಯ ಬಗ್ಗೆ ಮಾಹಿತಿಯ ಅಗತ್ಯವಿದ್ದರೆ ದೂರವಾಣಿ ಮೂಲಕ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಯಾವುದೇ ಊಹಾಪೋಹ ಸುದ್ಧಿಗಳಿಗೆ ಕಿವಿಗೊಡದಂತೆಯೂ ಭಕ್ತಾದಿಗಳಲ್ಲಿ ಮನವಿ ಮಾಡಲಾಗಿದೆ.