ಸುದ್ದಿ ಕನ್ನಡ ವಾರ್ತೆ

ಪಣಜಿ: ಗೋವಾದ ಕಾಣಕೋಣ ದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 555 ನೆಯ ವರ್ಧಂತಿ ಉತ್ಸವ ಕಾರ್ಯಕ್ರಮ ನವೆಂಬರ್ 28ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ರವರು ಪಾಲ್ಗೊಳ್ಳಲಿದ್ದಾರೆ.

ಮಠದ ವರ್ಧಂತಿ ಉತ್ಸವ ನಿಮಿತ್ತ ಸುಮಾರು ಒಂದು ವಾರಗಳವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಅಂದರೆ ನವೆಂಬರ್ 28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶ್ರೀಮಠಕ್ಕೆ ಆಗಮಿಸಲಿದ್ದು ಅಂದು ದೇಶದಲ್ಲಿಯೇ ಅತಿ ಎತ್ತರದ ಶ್ರೀರಾಮ ಮೂರ್ತಿಯನ್ನು ಪ್ರಧಾನಿ ಮೋದಿ ಅನಾವರಣ ಗೊಳಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಶುಕ್ರವಾರ ಶ್ರೀಮಠಕ್ಕೆ ಭೇಟಿ ನೀಡಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಒಡೆಯರ್ ಸ್ವಾಮೀಜಿ ರವರ ದರ್ಶನ ಪಡೆದು ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಭಗವಾನ್ ಶ್ರೀರಾಮನ ಮೂರ್ತಿ ನಿರ್ಮಾಣ ಕಾರ್ಯ ಶ್ರೀಮಠದ ಪರಿಸರದಲ್ಲಿ ಭರದಿಂದ ಸಾಗಿದೆ. ಇಷ್ಟೇ ಅಲ್ಲದೆ ವರ್ಧಂತಿ ಉತ್ಸವದ ನಿಮಿತ್ತವಾಗಿ ವಿವಿಧ ಸಿದ್ಧತಾ ಕಾರ್ಯಗಳು ಕೂಡ ಶ್ರೀಮಠದ ಪರಿಸರದಲ್ಲಿ ಭರದಿಂದ ಸಾಗಿದೆ. ಶ್ರೀಮಠದ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಮಠದ ಪರಿಸರದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕೂಡ ನಡೆಯಲಿದೆ.
ಸುಮಾರು ಒಂದು ವಾರಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರು ಶ್ರೀಮಠಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳಲ್ಲಿ ಸಂಭ್ರಮ ನಿರ್ಮಾಣವಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಶ್ರೀಮಠಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು ಸಿದ್ಧತಾ ಕಾರ್ಯ ಕೂಡ ಜೋರಾಗಿ ನಡೆದಿದೆ.