ಸುದ್ಧಿಕನ್ನಡ ವಾರ್ತೆ
ಪಣಜಿ: ರಾಜ್ಯ ಕೃಷಿ ಮಂತ್ರಿಯಾಗಿದ್ದ ರವಿ ನಾಯಕ್ ರವರ ನಿಧನದಿಂದಾಗಿ ಗೋವಾ ರಾಜ್ಯ ಸಚಿವ ಸಂಪುಟದಲ್ಲಿ ಒಂದು ಸ್ಥಾನ ಖಾಲಿ ಆಗಿದ್ದು ಈ ಸಚಿವ ಸ್ಥಾನ ಯಾರು ತುಂಬುತ್ತಾರೆ ಎಂಬ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

ಕಳೆದ ಒಂದು ತಿಂಗಳ ಹಿಂದಷ್ಟೇ ರಾಜ್ಯ ಸಚಿವ ಸಂಪುಟಕ್ಕೆ ದಿಗಂಬರ್ ಕಾಮತ್ ಹಾಗೂ ರಮೇಶ್ ತವಡಕರ್ ರವರಿಗೆ ಸ್ಥಾನ ನೀಡಿದ್ದರಿಂದ ಇನ್ನು ಸಂಪುಟ ಪುನರ್ರಚನೆ ಇಲ್ಲ ಎಂಬ ಮಾತು ಕೇಳಿಬಂದಿತ್ತು. ಆದರೆ ಇದೀಗ ರವಿ ನಾಯಕ್ ರವರ ನಿಧನದಿಂದಾಗಿ ಈ ಸ್ಥಾನದ ಕುರಿತು ಮತ್ತೆ ಚರ್ಚೆ ಆರಂಭಗೊಂಡಿದೆ. ಶಾಸಕರಾದ ನಿಲೇಶ್ ಕಾಬ್ರಾಲ್, ಮೈಕಲ್ ಲೋಬೊ, ಅಥವಾ ಸಂಕಲ್ಪ ಅಮೋಣಕರ್ ರವರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು ಎಂಬ ಚರ್ಚೆ ಕೂಡ ನಡೆಯುತ್ತಿದೆ.

ಕಳೆದ ಸುಮಾರು ಎರಡು ವರ್ಷಗಳ ಹಿಂದೆ ಅಲೆಕ್ಸ ಸಿಕ್ವೇರಾ ರವರನ್ನು ಸಚಿವ ಸ್ಥಾನಕ್ಕೆ ಸೇರಿಸಿಕೊಳ್ಳಲು ಬಿಜೆಪಿಯು ನೀಲೇಶ್ ಕಾಬ್ರಾಲ್ ರವರನ್ನು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿತ್ತು. ಈಗ ಸಿಕ್ವೇರಾ ರವರು ಕೂಡ ಸಚೊವ ಸಂಪುಟದಿಂದ ಹೊರಗಿದ್ದಾರೆ. ಆದರೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಡೆದ ಸಂಪುಟ ಪುನರ್ರಚನೆಯಲ್ಲಿ ಕಾಬ್ರಾಲ್ ರವರನ್ನು ಕೈಬಿಡಲಾಗಿತ್ತು. ಆದರೆ ಇದೀಗ ಖಾಲಿ ಆಗಿರುವ ಸಚಿವ ಸಂಪುಟ ಸ್ಥಾನಕ್ಕೆ ಕಾಬ್ರಾಲ್ ರವರನ್ನು ಮತ್ತೆ ಸೇರಿಸಿಕೊಳ್ಳಲಾಗುತ್ತದೆಯೇ..? ಎಂಬುದನ್ನು ಕಾದು ನೋಡಬೇಕಿದೆ. ಪಕ್ಷದ ಆದೇಶದ ಮೇರೆಗೆ ಅಂದು ಕಾಬ್ರಾಲ್ ರವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಇದೀಗ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದು ಕೂಡ ಕೆಲವರಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕಲಂಗುಟ್ ಶಾಸಕ ಮೈಕಲ್ ಲೋಬೊ ರವರ ಹೆಸರು ಕೂಡ ಸಚಿವ ಸ್ಥಾನದ ಚರ್ಚೆಯಲ್ಲಿದೆ. 2022 ರ ಗೋವಾ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಲ್ಲಿ ಶಾಸಕ ದಿಗಂಬರ್ ಕಾಮತ್ ಹಾಗೂ ಲೋಬೊ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಒಂದು ತಿಂಗಳ ಹಿಂದೆ ದಿಗಂಬರ್ ಕಾಮತ್ ರವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಶಾಸಕ ಲೋಬೊ ರವರಿಗೆ ಇದುವರೆಗೂ ಸಚಿವ ಸ್ಥಾನ ಲಭಿಸಲಿಲ್ಲ.

ಕೃಷಿ ಸಚಿವ ರವಿ ನಾಯಕ್ ರವರ ನಿಧನದಿಂದ ಪೊಂಡಾ ಕ್ಷೇತ್ರದ ಶಾಸಕ ಸ್ಥಾನ ತೆರವಾಗಿದೆ. ಇದೀಗ ಆರು ತಿಂಗಳ ಒಳಗಾಗಿ ಈ ಕ್ಷೇತ್ರದ ಚುನಾವಣೆ ನಡೆಯಬೇಕಿದೆ. ಈ ಶಾಸಕ ಸ್ಥಾನ ತೆರವಾಗಿದೆ ಎಂದು ವಿಧಾನಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ನಿಯಮದ ಪ್ರಕಾರ ಶಾಸಕರು ನಿಧನರಾದ ಆರು ತಿಂಗಳ ಒಳಗೆ ಆ ಕ್ಷೇತ್ರಕ್ಕೆ ಚುನಾವಣೆ ನಡೆಸಬೇಕಿದೆ. ರವಿ ನಾಯಕ್ ರವರ ಪುತ್ತರಾಗಿರುವ ರಿತೇಶ್ ಮತ್ತು ರಾಯ್ ಇಬ್ಬರೂ ಕೂಡ ಪೊಂಡಾ ಪುರಸಭೆಯಲ್ಲಿ ಕಾರ್ಪೊರೇಟರ್ ಗಳಾಗಿದ್ದಾರೆ. ಇವರಿಬ್ಬರಲ್ಲಿ ಯಾರಿಗಾದರೂ ಈ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಫರ್ಧಿಸಲು ಬಿಜೆಪಿ ಟಿಕೇಟ್ ನೀಡಲಿದೆಯೇ ಎಂದು ಕಾದುನೋಡಬೇಕಿದೆ.