ಸುದ್ದಿ ಕನ್ನಡ ವಾರ್ತೆ
ಪಣಜಿ: ಗೋವಾದ ಹಣಜೂನ್ ನಲ್ಲಿ ಐದು ಜನ ಪ್ರವಾಸಿಗರು ರಸ್ತೆ ಬದಿಯಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಪ್ರವಾಸಿಗರಿಗೆ 10,000 ದಂಡ ವಿಧಿಸಿದ್ದಾರೆ. ಇಂದಿನ ಪೋಸ್ಟ್ ಆಫೀಸ್ ಬಳಿ ಈ ಘಟನೆ ನಡೆದಿದ್ದು ಸಾರ್ವಜನಿಕ ಸ್ಥಳ ಸುರಕ್ಷೆ ಹಾಗೂ ಸ್ವಚ್ಛತೆಯ ನಿಯಮವನ್ನು ಉಲ್ಲಂಘಿಸಿರುವ ಕುರಿತಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಸ್ಥಳೀಯ ನಿವಾಸಿ ಡೇನಿ ಡಿಸೋಜ ರವರು ಪ್ರವಾಸಿಗರು ರಸ್ತೆ ಬದಿಯಲ್ಲಿ ಅಡುಗೆ ಮಾಡುತ್ತಿರುವುದನ್ನು ಗಮನಿಸಿದರು. ಈ ಕುರಿತಂತೆ ಸಮಾಜಸೇವಕ ರಮೇಶ್ ಬೋವಿ ರವರಿಗೆ ಮಾಹಿತಿ ನೀಡಿದರು. ರಮೇಶ್ ಭೋವಿರವರು ಘಟನಾ ಸ್ಥಳಕ್ಕೆ ಆಗಮಿಸಿ ಕೂಡಲೇ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದರು.
ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದರು ಹಾಗೂ ಪ್ರವಾಸಿಗರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು. ಪೊಲೀಸರು ಈ ಪ್ರವಾಸಿಗರಿಗೆ ಪ್ರತಿಯೊಬ್ಬ ಪ್ರವಾಸಿಗಳಿಂದ ತಲಾ ಎರಡು ಸಾವಿರ ರೂಗಳಂತೆ ಒಟ್ಟು 10,000 ದಂಡ ವಿಧಿಸಿ ಪ್ರವಾಸಿಗರನ್ನು ಬಿಡುಗಡೆಗೊಳಿಸಿದ್ದಾರೆ.
ಸ್ಥಳೀಯ ಪೊಲೀಸರು ಈ ಪ್ರಕರಣದಲ್ಲಿ ಕೂಡಲೇ ಕಾರ್ಯಾಚರಣೆ ನಡೆಸಿರುವುದಕ್ಕೆ ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತವಾಗಿದೆ. ಪ್ರವಾಸಿಗರು ಗೋವಾಕ್ಕೆ ಬಂದು ಈ ರೀತಿಯ ವರ್ತನೆಯನ್ನು ನಾವು ಸಹಿಸುವುದಿಲ್ಲ ಎಂದು ತಿಳಿಯ ನಿವಾಸಿಗಳು ಹೇಳಿಕೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರವಾಸಿಗರು ಇಂತಹ ವರ್ತನೆ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರ ಆದೇಶದ ಅನುಸಾರ ಗೋವಾ ರಾಜ್ಯದಲ್ಲಿ ರಸ್ತೆ ಬದಿಯಲ್ಲಿ ಅಥವಾ ಸಮುದ್ರ ತೀರದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡುವುದು ಅಪರಾಧವಾಗಿದೆ.