ಸುದ್ಧಿಕನ್ನಡ ವಾರ್ತೆ
ಪಣಜಿ: ಮಹದಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ 2023 ರಲ್ಲಿ ಸ್ಥಾಪಿಸಲಾಗಿರುವ ಸಭಾಗೃಹ ಸಮೀತಿಯ ಬೈಠಕ್ ಅಕ್ಟೋಬರ್ 24 ರಂದು ಪಣಜಿ ಸಮೀಪದ ಪರ್ವರಿಯ ವಿಧಾನಸಭೆಯ ಸಭಾಗೃಹದಲ್ಲಿ ನಡೆಯಲಿದೆ. ಗೋವಾ ವಿಧಾನಸಭೆಯ ಸಹಕಾರ್ಯದರ್ಶಿ ಮೋಹನ್ ಗಾಂವಕರ್ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಈ ಸಮೀತಿ ಸ್ಥಾಪನೆಯಾದ ನಂತರ ಸಮೀತಿಯ ಮೂರನೇಯ ಬೈಠಕ್ ಇದಾಗಿದೆ ಎನ್ನಲಾಗಿದೆ.
ಗೋವಾ,ಕರ್ನಾಟಕ, ಮಹಾರಾಷ್ಟ್ರ ಈ ಮೂರು ರಾಜ್ಯಗಳ ನಡುವೆ ಕಳೆದ ಹಲವು ವರ್ಷಗಳಿಂದ ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದ ವಿಚಾರಣೆ ಸವೋಛ್ಛ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಮಹದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ವಿಧಾನಸಭೆಯಲ್ಲಿ ಹಲವು ಬಾರಿ ಭಾರಿ ಚರ್ಚೆ ನಡೆಯುತ್ತಲೇ ಇದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಕಾರದಿಂದ ಮಹದಾಯಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂಬ ಆಘ್ರಹ ಕೂಡ ಪ್ರತಿಪಕ್ಷಗಳಿಂದ ವ್ಯಕ್ತವಾಗುತ್ತಿದೆ. ಆದರೆ ಆಡಳಿತ ಪಕ್ಷ ಬಿಜೆಪಿ ಮಾತ್ರ ಮಹದಾಯಿ ವಿಷಯದಲ್ಲಿ ಸರ್ವೋಚ್ಛ ನ್ಯಾಯಾಲಯದ ಪ್ರಕರಣದ ಮೇಲೆ ಲಕ್ಷ್ಯ ಕೇಂದ್ರೀಕರಿಸಿದೆ.
2023 ರಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ಸುಭಾಷ ಶಿರೋಡಕರ್ ರವರ ನೇತೃತ್ವದಲ್ಲಿ ಮಹದಾಯಿ ಸಭಾಗೃಹ ಸಮೀತಿ ಸ್ಥಾಪಿಸುವ ಘೋಷಣೆಯನ್ನು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಡಿದ್ದರು. ನಂತರ ಕೆಲ ದಿನಗಳ ನಂತರ ಸಭಾಗೃಹ ಸಮೀತಿಯನ್ನು ಸ್ಥಾಪಿಸಲಾಗಿತ್ತು. ಮಹದಾಯಿ ಸಭಾಗೃಹ ಸಮೀತಿಯಲ್ಲಿ ಗೋವಾ ಫೊರ್ ವರ್ಡ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ, ಶಾಸಕ ಅಲೆಕ್ಸ ರೆಜಿನಾಲ್ಡ ಲಾರೆನ್ಸ, ನೀಲೇಶ್ ಕಾಬ್ರಾಲ್, ಮಾಯಕಲ್ ಲೋಬೊ, ಕಾರ್ಲುಸ್ ಪರೇರಾ, ಡಾ. ಚಂದ್ರಕಾಂತ್ ಶೇಟಯೆ, ವೆಂಜಿ ವಿಯೆಗಾಸ್, ಪ್ರೇಮೇಂದ್ರ ಶೇಟ್, ಜೀತ್ ಅರೋಲ್ಕರ್, ವೀರೇಶ್ ಬೋರಕರ್ ರವರಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಮಳೆಗಾಲದ ಅಧಿವೇಶನದಲ್ಲಿ ಮಹದಾಯಿ ವಿಷಯ ಚರ್ಚೆಗೆ ಬಂದಿತ್ತು. ಅಂದು ಶಾಸಕ ವಿಜಯ್ ಸರ್ದೇಸಾಯಿ ರವರು ಮಾತನಾಡಿ- ಮಹದಾಯಿ ಸಭಾಗೃಹ ಸಮೀತಿಯ ಬೈಠಕ್ ನಡೆಯುತ್ತಿಲ್ಲ. ಇದರಿಂದಾಗಿ ಮಹದಾಯಿ ಸಭಾಗೃಹ ಸಮೀತಿಯನ್ನು ವಿಸರ್ಜಿಸಬೇಕು. ನಾನು ಸಭಾಗೃಹ ಸಮೀತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಇದರಿಂದಾಗಿ ಅಕ್ಟೋಬರ್ 24 ರಂದು ಬೈಠಕ್ ನಲ್ಲಿ ಶಾಸಕ ವಿಜಯ್ ಸರ್ದೇಸಾಯಿ ರವರು ಈ ಬೈಠಕ್ ನಲ್ಲಿ ಉಪಸ್ಥಿತರಿದ್ದು ರಾಜೀನಾಮೆ ನೀಡುತ್ತಾರೆಯೇ…? ಎಂಬತ್ತ ಎಲ್ಲರ ಲಕ್ಷ್ಯ ಕೇಂದ್ರೀಕೃತವಾಗಿದೆ.