ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಡಗಾಂವ ಸ್ಟೇಡಿಯಂ ಬಳಿ ಶೇವ್ ಪುರಿ ತಿಂದಿದ್ದರಿಂದ 35 ವರ್ಷದ ವ್ಯಕ್ತಿ ಇದ್ದಕ್ಕಿದ್ದಂತೆಯೇ ವಾಂತಿಯಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಪ್ರಸಾದ ಪರಿತ್ (35) ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ಈತ ಮಹಾರಾಷ್ಟ್ರದ ದೋಡಾಮಾರ್ಗದವನಾಗಿದ್ದ ಎನ್ನಲಾಗಿದೆ. ಈ ಘಟನೆಯಿಂದಾಗಿ ಈ ಭಾಗದಲ್ಲಿ ಆತಂಕಕಾರಿ ವಾತಾವರಣ ಸೃಷ್ಠಿಯಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ಪ್ರಸಾದ ಎಂಬ ವ್ಯಕ್ತಿ ಮಡಗಾಂವ ಸ್ಟೇಡಿಯಂ ಬಳಿ ಶೇವ್ ಪುರಿ ತಿನ್ನುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಅವ್ಯಸ್ಥನಾದ. ಕೂಡಲೇ ಈತನಿಗೆ ವಾಂತಿ ಆರಂಭವಾಯಿತು. ಕೂಡಲೇ ಈತನನ್ನು ದಕ್ಷಿಣ ಗೋವಾ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಈತ ಆಸ್ಪತ್ರೆಗೆ ತಲುಪುವ ಮುನ್ನವೇ ಸಾವನ್ನಪ್ಪಿದ ಎನ್ನಲಾಗಿದೆ. ನಂತರ ವೈದ್ಯರು ಈತನು ಸಾವನ್ನಪ್ಪಪಿರುವುದನ್ನು ಖಚಿತಪಡಿಸಿದರು.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳೀಯ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿದರು. ಪೋಲಿಸರು ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಪ್ರಸಾದ ಎಂಬ ಈ ವ್ಯಕ್ತಿಯ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಹೆಚ್ಚಿ ತನಿಖೆ ಆರಂಭಿಸಿದ್ದಾರೆ. ಮೃತ ವ್ಯಕ್ತಿಯ ಫಾರೆನ್ಸಿಕ್ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂಬ ಮಾಹಿತಿ ನೀಡಿದ್ದಾರೆ.
ಪ್ರಸಾದ ಎಂಬ ವ್ಯಕ್ತಿಯು ಶೇವ್ ಪುರಿ ಸೇವಿಸಿದ ನಂತರ ಸಾವನ್ನಪ್ಪಿರುವುದು ಆತಂಕ ಹೆಚ್ಚಿಸಿದೆ. ಈ ಘಟನೆಯಿಂದಾಗಿ ಸ್ವಚ್ಛತೆಯ ಪ್ರಶ್ನೆ ಕೂಡ ಉದ್ಭವಿಸಿದೆ. ರಸ್ತೆಯ ಬದಿಯಲ್ಲಿ ಆಹಾರ ಸೇವಿಸುವುದಕ್ಕೆ ಜನ ಆತಂಕಪಡುವಂತಾಗಿದೆ.