ಸುದ್ಧಿಕನ್ನಡ ವಾರ್ತೆ
ಪಣಜಿ: ಪ್ರಧಾನಿ ನರೇಂದ್ರ ಮೋದಿ ಅವರು ಕೋಟ್ಯಂತರ ಭಾರತೀಯರ ಅನುಕೂಲಕ್ಕಾಗಿ ಜಿಎಸ್‍ಟಿಯಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಇದು ವ್ಯಾಪಾರ ಮಾಡುವುದು ಮತ್ತು ಬದುಕುವುದನ್ನು ಸುಲಭಗೊಳಿಸಿದೆ. ಎಲ್ಲೆಡೆ ಜಿಎಸ್‍ಟಿ 2.0 ಜಾರಿಗೆ ಬಂದಿದೆ. ಜಿಎಸ್‍ಟಿಯ ನಾಲ್ಕು ಸ್ಲ್ಯಾಬ್‍ಗಳನ್ನು ಕೇವಲ ಎರಡು, 5 ಮತ್ತು 18 ಪ್ರತಿಶತಕ್ಕೆ ಇಳಿಸಲಾಗಿದೆ. ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಗೋವಾದ ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಮನವಿ ಮಾಡಿದರು. ಸಚಿವ ಸಂಪುಟ ಸಭೆಯ ನಂತರ ಅವರು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು.

 

ನವರಾತ್ರಿ ಹಬ್ಬ ಇಂದಿನಿಂದ ಪ್ರಾರಂಭವಾಗಿದೆ. ಮುಂದಿನ ಒಂಬತ್ತು ದಿನಗಳವರೆಗೆ ರಾಜ್ಯದ ವಿವಿಧ ದೇವಾಲಯಗಳಲ್ಲಿ ನವರಾತ್ರಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಜಿಎಸ್‍ಟಿ 2.0 ಪ್ರಧಾನಿ ಮೋದಿ ಅವರು ಎಲ್ಲಾ ಭಾರತೀಯರಿಗೆ ನೀಡಿದ ನವರಾತ್ರಿ ಉಡುಗೊರೆಯಾಗಿದೆ. ಇದಕ್ಕಾಗಿ ನಾವು ಅವರಿಗೆ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹೊಸ ಜಿಎಸ್‍ಟಿ ಬದಲಾವಣೆಯು ಸರ್ಕಾರಕ್ಕಿಂತ ಗೋವಾದ ಜನರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಇದು ಖಂಡಿತವಾಗಿಯೂ ಅವರ ಸಂತೋಷ ಸೂಚ್ಯಂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.

ರಾಜ್ಯ ತೆರಿಗೆ ಆಯುಕ್ತರ ಕಚೇರಿ ಹೊಸ ಜಿಎಸ್‍ಟಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದೆ. ಕಡಿಮೆಯಾದ ಜಿಎಸ್‍ಟಿ ದರದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕೈಗಾರಿಕೆ ಮತ್ತು ವ್ಯಾಪಾರ ವಲಯಕ್ಕೆ ಮನವಿ ಮಾಡಲಾಗಿದೆ. ಹೊಸ ಜಿಎಸ್‍ಟಿಯ ಪ್ರಯೋಜನವನ್ನು ಗ್ರಾಹಕರು ಪಡೆಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಇಲಾಖೆ ಸಿಬ್ಬಂದಿ ಚಿಲ್ಲರೆ ಅಂಗಡಿಗಳಿಗೆ ಭೇಟಿ ನೀಡುವಂತೆ ಆದೇಶಿಸಲಾಗಿದೆ. ಹೊಸ ದರಗಳನ್ನು ಜಾರಿಗೆ ತರದಿದ್ದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊಸ ಜಿಎಸ್‍ಟಿಗೆ ಸಂಬಂಧಿಸಿದಂತೆ ಕೆಲವು ಕಚೇರಿಗಳನ್ನು ಸಂಪರ್ಕಿಸಲು ರಾಜ್ಯ ತೆರಿಗೆ ಆಯುಕ್ತ ಎಸ್.ಎಸ್. ಗಿಲ್ ಮನವಿ ಮಾಡಿದ್ದಾರೆ.

 

ಕಾಣಕೋಣಕರ್ ಪ್ರಕರಣದಲ್ಲಿ ಸಮಗ್ರ ತನಿಖೆ
ರಾಮ ಕಾಣಕೋಣಕರ್ ಹಲ್ಲೆ ಪ್ರಕರಣದಲ್ಲಿ ಪೆÇಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ಇಲ್ಲಿಯವರೆಗೆ, 23 ಜನರನ್ನು ಬಂಧಿಸಲಾಗಿದೆ. ಕೆಲವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದೆ. ಎಲ್ಲಾ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂಬುದು ಖಚಿತ. ಗೋವಾದಲ್ಲಿ ಗೂಂಡಾಗಿರಿಯನ್ನು ಸಹಿಸಲಾಗುವುದಿಲ್ಲ. ಅಪರಾಧಗಳನ್ನು ಪರಿಹರಿಸುವಲ್ಲಿ ಗೋವಾ ಪೆÇಲೀಸರು ಉತ್ತಮ ದಾಖಲೆಯನ್ನು ಹೊಂದಿದ್ದಾರೆ ಎಂದು ಗೋವಾ ಸಿಎಂ ನುಡಿದರು.

 

ಓಂಕಾರ್ ಆನೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು!

ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಅರಣ್ಯ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ ಆನೆ ಓಂಕಾರ್ ಅನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಸಾವಂತ್ ಹೇಳಿದರು. ಈ ನಿಟ್ಟಿನಲ್ಲಿ ರಾಜ್ಯ ಅರಣ್ಯ ಸಚಿವರು ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ರಾಜ್ಯದ ರೈತರಿಗೆ ಓಂಕಾರ್ ಆನೆಯಿಂದ ಉಂಟಾದ ಹಾನಿಗೆ ಪರಿಹಾರ ನೀಡಲಾಗುವುದು ಎಂದರು.