ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿರುವ ಎಲ್ಲ ಕಂಪನಿಗಳು ಹೊರ ರಾಜ್ಯದವರಿಗೆ ಉದ್ಯೋಗ ನೀಡುವ ಬದಲಾಗಿ ಗೋವಾದ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಗೋವಾದಲ್ಲಿರುವ ಎಲ್ಲ ಕಂಪನಿಗಳಿಗೆ ಆದೇಶ ಹೊರಡಿಸಿದ್ದಾರೆ.
ಗೋವಾದಲ್ಲಿ ಸ್ಥಾಪನೆಗೊಂಡಿರುವ ಹೊರರಾಜ್ಯದ ಕಂಪನಿಗಳು ತಮ್ಮ ಕಂಪನಿಯ ನೌಕರಿ ಭರ್ತಿಯ ಇಂಟರ್ ವ್ಯೂವ್ ನ್ನು ಗೋವಾದಲ್ಲಿಯೇ ನಡೆಸಬೇಕು ಹಾಗೂ ಗೋವಾದ ಸ್ಥಳೀಯರಿಗೆ ಉದ್ಯೋಗಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಗೋವಾದಲ್ಲಿರುವ ಎಲ್ಲ ಕಂಪನಿಗಳಿಗೆ ನೂಚನೆ ಹೊರಡಿಸಿದ್ದಾರೆ. ಕಾರ್ಮಿಕ ಇಲಾಖೆಯು ಈ ಕುರಿತಂತೆ ನಿಯಂತ್ರಿಸಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.
ಗೋವಾದಲ್ಲಿರುವ ಎಂಆರ್ ಎಫ್ ಕಂಪನಿಯ ಪೊಂಡಾದಲ್ಲಿರುವ ಯೂನಿಟ್ ಗಾಗಿ 250 ಕಾರ್ಮಿಕರ ಭರ್ತಿಗಾಗಿ ಕಂಪನಿಯು ಕುಡಾಳ-ಸಿಂಧುದುರ್ಗದಲ್ಲಿ ಇಂಟರ್ ವ್ಯೂವ್ ಕರೆದಿತ್ತು. ಈ ಜಾಹೀರಾತು ಪ್ರಕಟಗೊಳ್ಳುತ್ತಿದ್ದಂತೆಯೇ ಗೋವಾ ಫೊರ್ ವರ್ಡ ಅಧ್ಯಕ್ಷ ವಿಜಯ್ ಸರ್ದೇಸಾಯಿ ಹಾಗೂ ಆರ್ ಜಿ ಪಕ್ಷದ ಅಧ್ಯಕ್ಷ ಮನೋಜ್ ಪರಬ್ ಆಕ್ಷೇಪವೆತ್ತಿದ್ದರು. ಗೋವಾದಲ್ಲಿ ನಿರುದ್ಯೋಗ ಸಮಸ್ಯೆಯಿರುವಾಗ ಗೋವಾದಲ್ಲಿನ ಕಂಪನಿಗಳು ಗೋವಾದ ಸ್ಥಳೀಯರಿಗೆ ಉದ್ಯೋಗ ನೀಡದೆಯೇ ಹೊರ ರಾಜ್ಯದವರಿಗೆ ಉದ್ಯೋಗ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದರಿಂದಾಗಿ ಸ್ಥಳೀಯ ಯುವಕರಿಗೆ ಅನ್ಯಾಯವಾಗುತ್ತಿದೆ. ಗೋವಾದ ಕಂಪನಿಗಳಿಗೆ ಗೋವಾದ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದರು.
ಗೋವಾದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಗೋವಾದ ಎಂ ಆರ್ ಎಫ್ ಕಂಪನಿಯು ಮಹಾರಾಷ್ಟ್ರದಲ್ಲಿ ಆಯೋಜಿಸಿದ್ದ ನೌಕರಿ ಭರ್ತಿಯ ಇಂಟರ್ ವ್ಯೂವ್ ನ್ನು ಗೋವಾದ ಪೊಂಡಾದ ಫರ್ಮಾಗುಡಿಯಲ್ಲಿ ಶುಕ್ರವಾರ ನಡೆಸುವುದಾಗಿ ಜಾಹೀರಾತನ್ನು ಪ್ರಕಟಿಸಿತ್ತು. ಇದರಂತೆಯೇ ಶುಕ್ರವಾರ ಕಂಪನಿಯು ಗೋವಾದ ಪೊಂಡಾದಲ್ಲಿಯೇ ಇಂಟರ್ ವ್ಯೂವ್ ನಡೆಸಿತ್ತು.
ಈ ಕುರಿತಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರನ್ನು ಮಾಧ್ಯಮ ವರದಿಗಾರರು ಪ್ರಶ್ನಿಸಿದಾಗ- ಗೋವಾದಲ್ಲಿರುವ ಎಲ್ಲ ಹೊರ ರಾಜ್ಯದ ಕಂಪನಿಗಳು ನೌಕರಿ ಭರ್ತಿ ಮಾಡುವಾಗ ಗೋವಾದ ಸ್ಥಳೀಯರಿಗೆ ಪ್ರಾಧಾನ್ಯತೆ ನೀಡಬೇಕು ಎಂಬ ಸೂಚನೆಯನ್ನು ಕಂಪನಿಗಳಿಗೆ ಈ ಹಿಂದೆಯೂ ನೀಡಲಾಗಿದೆ. ಇದನ್ನು ಕಾರ್ಮಿಕ ಇಲಾಖೆ ನೋಡಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.