ಸುದ್ದಿ ಕನ್ನಡ ವಾರ್ತೆ
ಮಂತ್ರಾಲಯದ ಪ್ರಭುಗಳಾದ ಶ್ರೀ ಗುರು ರಾಘವೆಂದ್ರರ ಸನ್ನಿಧಿಯಾದ ಮಂತ್ರಾಲಯದಲ್ಲಿ ಐದು ರಾಜ್ಯಗಳ ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ಅಧ್ಯಕ್ಷರ ಮುಂದಾಳ್ತನದಲ್ಲಿ ಆಯೋಜಿತವಾದ ಪ್ರಪ್ರಥಮ ಕನ್ನಡ ಸಮ್ಮೇಳನ ಇಂದು ಅಂದರೆ *೨೨-೦೮-೨೦೨೫* ರಂದು “ಗುರುರಾಜಾಂಗಣ” ಸಭಾಂಗಣದಲ್ಲಿ ಅದ್ಧೂರಿಯಾಗಿ ಪ್ರಾರಂಭವಾಯಿತು. ಈ ಸಮಾರಂಭಕ್ಕೆ ಬೇಕಾದ ವೇದಿಕೆಯನ್ನು ಕನ್ನಡದ ಅಭಿಮಾನಿಗಳಾದ ಸ್ವಯಂ ಸೇವಕರು ಅಚ್ಚುಕಟ್ಟಾಗಿ ಸಜ್ಜು ಮಾಡಿದ್ದರು.
ಮುಂಜಾನೆ ೯.೦೦ ಗಂಟೆಗೆ ಸರಿಯಾಗಿ ಸಭಾಂಗಣದ ಮುಂದೆ ರಾಷ್ಟ್ರ ಧ್ವಜವನ್ನು ಹಾರಿಸಿ, ರಾಷ್ಟ್ರಗೀತೆಯನ್ನು ಹಾಡಿ ಪತಾಕೆಗೆ ವಂದನೆ ಸಲ್ಲಿಸಲಾಯಿತು. ನಂತರ ಪರಿಷತ್ತಿನ ಧ್ವಜಾರೋಹಣ ಮಾಡಿ ನಾಡಗೀತೆಯನ್ನು ಹಾಡಲಾಯಿತು. ಕಾರ್ಯಕ್ರಮದಲ್ಲಿ ಈ ಸಮ್ಮೇಳನದ ರೂವಾರಿಗಳಾದ ಶ್ರೀ ಅಂಜನ್ ಕುಮಾರ್, ಶ್ರೀ ಗುಡುಗುಂಟಿ ವಿಠಲ್ ಜೋಶಿ, ಶ್ರೀ ಸೂರಿ ಶ್ರೀನಿವಾಸ್, ಶ್ರೀ ಸೋಮಶೇಕರ್ ಜಮಶೆಟ್ಟಿ, ಶ್ರೀ ಸಿದ್ಧಣ್ಣ ಸಂಗಪ್ಪ ಮೇಟಿ ಅವರುಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಶ್ರೀ ಮಹೇಶ್ ಜೋಶಿ, ಕಾರ್ಯದರ್ಶಿಗಳಾದ ಶ್ರೀ ಪಟೇಲ್ ಪಾಂಡು ಹಾಗು ಶ್ರೀ ಮದನ್ ಗೌಡರು, ಗೌರವ ಕಾರ್ಯದರ್ಶಿಗಳು, ಶ್ರೀ ಡಿ.ಆರ್. ವಿಜಯಕುಮಾರ್, ಕೋಶಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಮತ್ತು ಇತರೆ ಆಹ್ವಾನಿತರು ಹಾಜರಿದ್ದರು. ಈ ಧ್ವಜಾರೋಹಣಗಳೊಂದಿಗೆ ಕಾರ್ಯಕ್ರಮದ ಉದ್ಘಾಟನೆಯಾಯಿತು.
ವೇದಿಕೆಯ ಮೇಲಿನ ಕಾರ್ಯಕ್ರಮ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ ಸುಬುಧೇಂದ್ರ ತೀರ್ಥರ ಆಗಮನದೊಂದಿಗೆ ಶುರುವಾಯಿತು. ಮತ್ತೊಮ್ಮೆ ನಾಡಗೀತೆಯೊಂದಿಗೆ ಸಭೆ ಪ್ರಾರಂಭವಾಯಿತು. ನಂತರ ದೀಪ ಪ್ರಜ್ವಲನೆ, ತಾಯಿ ಭುವನೇಶ್ವರಿ ಹಾಗು ರಾಘವೇಂದ್ರ ಸ್ವಾಮಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಆಂದ್ರ ಪ್ರದೇಶ ಘಟಕದ ಅಧ್ಯಕ್ಷರು ಶ್ರೀ ಅಂಜನ್ ಕುಮಾರ್ ರವರು ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ ಸುಬುಧೇಂದ್ರ ತೀರ್ಥರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಶ್ರೀ ಮಹೇಶ್ ಜೋಶಿ, ಕಾರ್ಯದರ್ಶಿಗಳಾದ ಶ್ರೀ ಪಟೇಲ್ ಪಾಂಡು ಹಾಗು ಶ್ರೀ ಮದನ್ ಗೌಡರು, ಗೌರವ ಕಾರ್ಯದರ್ಶಿಗಳು, ಶ್ರೀ ಡಿ.ಆರ್. ವಿಜಯಕುಮಾರ್, ಕೋಶಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಮತ್ತು ಸಮ್ಮೇಳನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಹೆಬ್ರಿಯವರ, ವಿಶೇಷ ಅತಿಥಿಗಳಾದ ಶ್ರೀ ಪೋಟಲೂರು ಹರಿಕೃಷ್ಣ ಹಾಗು ಎಲ್ಲಾ ಕನ್ನಡ ಮನಸ್ಸುಗಳನ್ನು ಆತ್ಮೀಯವಾಗಿ ಸ್ವಾಗತ ಕೋರಿದರು.
ಅದಾದ ನಂತರ, ತೆಲಂಗಾಣಾ ಘಟಕದ ಅಧ್ಯಕ್ಷರಾದ ಶ್ರೀ ಗುಡುಗುಂಟಿ ವಿಠಲ್ ಜೋಶಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ೫ ಘಟಕಗಳು ಸೇರಿ ಈ ಕಾರ್ಯಕ್ರಮ ರೂಪು ತಾಳಿದ ಬಗೆ, ಹಾಗು ಪ. ಪೂ. ಶ್ರೀಪಾದರಿಂದ ಮತ್ತು ಕೇಂದ್ರ ಪರಿಷತ್ತಿನ ಅಧ್ಯಕ್ಷರ, ಕಾರ್ಯದರ್ಶಿಯವರ ತಮಗೆ ದೊರೆತ ತಕ್ಷಣ ಒಪ್ಪಿಗೆ ಮತ್ತು ಬೆಂಬಲಗಳ ಬಗ್ಗೆ ಸಭಾಸದರಿಗೆ ತಿಳಿಸಿಕೊಟ್ಟರು. ಹಾಗೆಯೇ ಸಮ್ಮೇಳನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಹೆಬ್ರಿಯವರ ಸಾಹಿತ್ಯ ಕೃಷಿಯನ್ನು ಸಭೆಗೆ ಪರಿಚಯ ಮಾಡಿದರು. ಶ್ರೀಮಾನ್ ಹೆಬ್ರಿಯವರು ಬರೆದ ೫೫೦ ಕ್ಕೂ ಹೆಚ್ಚು ಪುಸ್ತಕಗಳ ಬಗ್ಗೆ ಪ್ರಸ್ತಾವಿಸುತ್ತ, ಅವರ ಅಮೋಘ ಸಾಹಿತ್ಯ ಕೃಷಿಯನ್ನು ಕೊಂಡಾಡಿದರು. ಈ ಪ್ರಪ್ರಥಮ ಅಂತರ ರಾಷ್ಟ್ರ ಕನ್ನಡ ಸಮ್ಮೇಳನಕ್ಕೆ ಅವರು ಸೂಕ್ತ ಅಧ್ಯಕ್ಷರು ಎನ್ನುತ್ತ ಸಭೆಗೆ ತಿಳಿಸಿದರು.
ನಂತರ ಆಶಯ ನುಡಿಯನ್ನು ಸಭೆಯ ಮುಂದಿಟ್ಟ ಚಿಕ್ಕಮಗಳೂರು ಜಿಲ್ಲೆಯ ಕ.ಸಾ.ಪ ಘಟಕದ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಈ ಸಮ್ಮೇಳನದ ಆಶಯ ಕನ್ನಡ ಮನಸ್ಸುಗಳನ್ನ ಒಂದಾಗಿಸುವುದು ಮತ್ತು ಬಹು-ಭಾಷೆಗಳ ಸಮನ್ವಯ ಆಗಿದೆ ಎಂದರು.
ನಂತರ ಕ.ಸಾ.ಪದ ಕೇಂದ್ರ ಅಧ್ಯಕ್ಷರಾದ ನಾಡೋಜ ಶ್ರೀ ಮಹೇಶ್ ಜೋಷಿಯವರು ತಮ್ಮ ಮೇಲೆ ರಾಯರ ಕೃಪೆಯ ಬಗ್ಗೆ ಮತ್ತು ಶ್ರೀಗಳ ಉದಾರ ಮನಸ್ಸಿನ ಬಗ್ಗೆ ಮಾತಾಡಿದರು. ಈ ರೀತಿಯ ಅಂತರ ರಾಜ್ಯ ಕನ್ನಡ ಸಮ್ಮೇಳನವನ್ನು ಮಾಡಲು ಮುಂದಾಳುತನ ವಹಿಸಿರುವ ಐದೂ ಘಟಕಗಳ ಅಧ್ಯಕ್ಷರನ್ನು ಅಭಿನಂದಿಸಿದರು. ನಂತರ ಕ.ಸಾ.ಪ. ದ ಗೌರವ ಕಾರ್ಯದರ್ಶಿಯಾದ ಶ್ರೀ ಪಟೇಲ್ ಪಾಂಡು ಅವರು ಸಮ್ಮೇಳನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಹೆಬ್ರಿಯವರ ಅಧ್ಯಕ್ಷ ಭಾಷಣದ ಪ್ರತಿಯನ್ನು ಬಿಡುಗಡೆ ಮಾಡಿದರು.
ನಂತರ ಬಂದದ್ದು ಸಮ್ಮೇಳನದ ಅಧ್ಯಕ್ಷರ ಅಧ್ಯಕ್ಷ ಸಂದೇಶ. ಶ್ರೀ ಹೆಬ್ರಿಯವರು ಮಾತನಾಡುತ್ತ ಇದಾಗಲೇ ತಮ್ಮ ಸಮ್ಮೇಳನದ ಭಾಷಣದ ಪ್ರತಿಯನ್ನು ಎಲ್ಲರಿಗೂ ಹಂಚಿರುವ ಕಾರಣ ಅದರಲ್ಲಿರುವ ವಿಷಯವನ್ನು ಸಂಕ್ಷಿಪ್ತವಾಗಿ ಪ್ರಸ್ತಾವಿಸಿದರು ಅವರು ಸಹ ಈ ಸಮ್ಮೇಳನದ ಆಯೋಜನೆಯನ್ನು ಕೊಂಡಾಡಿದರು. ತಾವು ಮಂತ್ರಾಲಯಕ್ಕೆ ಬರುವುದು ಒಂದು ದೈವ ನಿರ್ಣಯವೆಂಬಂತಿದೆ ಎಂದರು. ನಂತರ ಗುರು ರಾಘವೇಂದ್ರರ ಬಗ್ಗೆ ಅಕಾರ ಪದಗಳ ಮಾಲೆಯಿಂದ ಸ್ತುತಿಸಿ ಸಭಿಕರ ಮೆಚ್ಚುಗೆ ಗಳಿಸಿದರು.
ನಂತರ ಶ್ರೀಗಳ ಸಂದೇಶ ಪ್ರಾರಂಭವಾಯಿತು. ಅವರ ಆಶೀರ್ವಚನ ಅತ್ತ ಕನ್ನಡ ಸಾಹಿತ್ಯಕ್ಕೂ, ಇತ್ತ ಮಂತ್ರಾಲಯ ಕ್ಷೇತ್ರ ಮಹಿಮೆಗೂ ನಂಟನ್ನು ಹೆಣೆಯುತ್ತ ಸಾಗಿತ್ತು. ಕಲಿಯುಗ ಕಲ್ಪತರು, ಕಾಮಧೇನು ಕಲ್ಪವೃಕ್ಷರೆಂದೇ ಪ್ರಖ್ಯಾತರಾದ ಶ್ರೀ ರಾಘವೇಂದ್ರಸ್ವಾಮಿಯವರ ಮಾತೃಭಾಷೆಯೂ ಕನ್ನಡ ಎಂದು ತಿಳಿಸಿದರು. ಮಂತ್ರಾಲಯದ ಸುತ್ತ ಸಿಕ್ಕಿರುವ ಕನ್ನಡ ಶಾಸನಗಳ ಬಗ್ಗೆ ಸಹ ಶ್ರೀಗಳು ಬೆಳಕು ಬೀರಿದರು. ಶ್ರೀರಾಯರ ಮಹಿಮೆ ಅಪಾರ ಎಂದು ಸಾರುತ್ತ ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಪ್ರಪ್ರಥಮ ಅಂತರ ರಾಜ್ಯಗಳ ಕನ್ನಡ ಸಮ್ಮೇಳನ ನಡೆಯುತ್ತಿರುವುದು ಒಂದು ಮಹತ್ತರವಾದ ವಿಷಯ ಎಂದು ಸಾರಿ ತಮ್ಮ ಆಶೀರ್ವಾದ ನೀಡಿ ಮಂಗಳ ಹಾಡಿದರು. ಅಲ್ಲಿಗೆ ಉದ್ಘಾಟನಾ ಕಾರ್ಯಕ್ರಮ ಮುಗಿಯಿತು.
ಅದಾದ ನಂತರ ವಿಚಾರ ಗೋಷ್ಠಿ ಪ್ರಾರಂಭವಾಯಿತು. ಮೊದಲನೆಯದಾಗಿ “ಗಡಿನಾಡು ಕನ್ನಡಿಗರ ಕೊಡುಗೆ” ಗೋಷ್ಠಿ ಮೊದಲಾಯಿತು. ಈ ಗೊಷ್ಠಿಯ ಅಧ್ಯಕ್ಷರಾಗಿ ತೆಲಂಗಾಣ ಘಟಕದ ಸದಸ್ಯರು ಮತ್ತು ಹೈದರಾಬಾದಿನ ಹಿರಿಯ ಸಾಹಿತಿಗಳೂ ಆದ ಶ್ರೀ ಗೋನವಾರ ಕಿಶನ್ ರಾವ್ ವಹಿಸಿದ್ದರು. ಈ ನಿಟ್ಟಿನಲ್ಲಿ ಮೊದಲು ಮಾತಾಡಿದ ಕೃಷ್ಣಾ ಗ್ರಾಮದ ಶ್ರೀ ಅಮರ ದೀಕ್ಷಿತ್ ಅವರು ತಮ್ಮ ಇಪ್ಪತ್ತೈದು ವರ್ಷಗಳ ಹೋರಾಟದ ಬಗ್ಗೆ ತಿಳಿಸಿದರು. ತಮ್ಮ ಸುತ್ತ ಮುತ್ತ ಗ್ರಾಮಗಳಲ್ಲಿ ೨೪ ಸಾವಿರ ವಿಧ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದಾರೆ, ಅವರ ಮುಂದಿನ ಜೀವನಕ್ಕೆ ಬೇಕಾದ ಬೆಂಬಲವನ್ನು ಕರ್ನಾಟಕ ಸರಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನೀಡಬೇಕೆಂದು ಈ ಸಮ್ಮೇಳನದ ಮೂಲಕ ಅವರು ಕರೆ ನೀಡಿದರು. ನಂತರ ಮಾತನಾಡಿದ ಹೈದರಾಬಾದಿನ ಪತ್ರಕರ್ತ ಮತ್ತ ಶೋಧವಾಣಿ ಪತ್ರಿಕೆಯ ಸಂಪಾದಕರಾದ ಶ್ರೀ ಧರ್ಮೆಂದ್ರ ಪೂಜಾರಿ ಬಗ್ದೂರಿ ಅವರು ಹೈದರಾಬಾದನಲ್ಲಿದ್ದ ಲಕ್ಷಗಟ್ಟಲೆ ಕನ್ನಡದ ಜನ, ಅಲ್ಲಿ ನಡೆಯುತ್ತಿರುವ ಸಾಹಿತ್ಯ ಕೃಷಿ, ಸ್ಥಳೀಯ ಕನ್ನಡ ಸಂಸ್ಥಗಳು, ತಮ್ಮ ಪತ್ರಿಕೆಯ ಬಗ್ಗೆ ಸಭೆಗೆ ಪರಿಚಯ ಮಾಡಿ ಕೊಟ್ಟರು. ಅವರು ಸಹ ಹೊರನಾಡ ಕನ್ನಡಿಗರ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಮನವಿ ಮಾಡಿದರು. ತದನಂತರ ಮಾತಾಡಿದ ಶ್ರೀ ನಾ.ಮಾ. ಮರುಳಾರಾಧ್ಯ ಅವರು ಆದೋನಿ ಮತ್ತು ಪರಿಸರ ಪ್ರಾಂತ್ಯಗಳಲ್ಲಿ ನಡೆದ ಕನ್ನಡ ಏಕೀಕರಣದ ಬಗ್ಗೆ ಸಭಿಕರ ಗಮನ ಸೆಳೆದರು. ಈ ಏಕೀಕರಣದ ಸಲುವಾಗಿ ಹೋರಾಟ ನಡೆಸಿದ ರಂಗನ ಗೌಡ, ಎಲೆ ಮಲ್ಲೇಶಪ್ಪ ಮುಂತಾದ ಚಳುವಳಿಯ ಮುಖ್ಯಸ್ಥರನ್ನು ನೆನೆದರು. ಇಂದಿಗೂ ಈ ಗಡಿ ಪ್ರಾಂತಗಳಲ್ಲಿ ಕನ್ನಡ ಮಾತು, ಅಭ್ಯಾಸ ನಡೆದಿದ ಮತ್ತು ಕನ್ನಡ ಭಾಷೆಯ ಬಗ್ಗೆ ಅಭಿಮಾನ ತುಂಬಿದೆ ಎಂದು ಮಂಡಿಸಿದರು. ಗೋಷ್ಠಿಯಲ್ಲಿ ಕೊನೆಯದಾಗಿ ಗೋಷ್ಟಿಯ ಅಧ್ಯಕ್ಷರಾಗಿದ್ದ ಶ್ರೀ ಗೋನವಾರ ಕಿಶನ್ ರಾವ್ ಗೋಷ್ಠಿಯಲ್ಲಿ ಮಂಡಿಸಲಾದ ವಿಚಾರಗಳ ಬಗ್ಗೆ ತಮ್ಮ ಸಹಮತ ವ್ಯಕ್ತಪಡಿಸುತ್ತ ಗಡಿನಾಡ ಕನ್ನಡಿಗರ ಬಗ್ಗೆ ಡಾ. ಕೆ.ವಿ. ತಿರುಮಲೇಶ್ ಅವರು “ನಾವ್ಯಾರೂ ಗಡಿನಾಡ ಕನ್ನಡಿಗರಲ್ಲ, ಹೊರನಾಡ ಕನ್ನಡಿಗರಲ್ಲ, ಒಡನಾಡ ಕನ್ನಡಿಗರು” ಎನ್ನುವ ಹೇಳಿಕೆಯನ್ನು ಸಭೆಗೆ ತಿಳಿಸಿದರು. ಗೋಷ್ಟಿಯಲ್ಲಿ ಐದೂ ರಾಜ್ಯಗಳ ವಿವಿಧ ಸಾಹಿತಿಗಳು ಉಪಸ್ಥಿತಿಯಲ್ಲಿದ್ದರು. ಇದರೊಂದಿಗೆ ಗೋಷ್ಠಿ ಯಶಸ್ವಿಯಾಗಿ ತನ್ನ ಆಶಯ ಪೂರೈಸಿತು. ಭಾಗವಹಿಸಿದವರಿಗೆ ಸಮ್ಮಳನದ ಅಧ್ಯಕ್ಷರಿಂದ ಸ್ಮರಣಿಕೆಗಳನ್ನು ನೀಡಲಾಯಿತು.
ನಂತರ ನಡೆದ ಗಮಕ ಗೋಷ್ಠಿಯಲ್ಲಿ ಕುಮಾರವ್ಯಾಸ ಭಾರತದ ಕಥಾಪ್ರಸಂಗದಲ್ಲಿ ಕರ್ಣ ಮತ್ತು ಕೃಷ್ಣನ ಸಂವಾದದ ಪ್ರಸ್ತುತಿ ನಡೆಯಿತು. ಗೋಷ್ಠಿಯ ಅಧ್ಯಕ್ಷರಾಗಿ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರಾದ ಡಾ. ಎ.ಎ. ಪ್ರಸನ್ನ ಅವರು ಉಪಸ್ಥಿತರಿದ್ದು, ವಿಶಿಷ್ಟ ರೀತಿಯಲ್ಲಿ ಅದರ ಪರಿಚಯ ಮಾಡಿಸಿದರು. ಗೋಷ್ಠಿಯನ್ನು ಕೊಪ್ಪದ ಸಾಹಿತಿಯಾದ ಶ್ರೀಮತಿ ಚಂದ್ರಕಲಾ ಅವರು ಉದ್ಘಾಟಿಸಿದರು. ನಂತರ ಕುಮಾರವ್ಯಾಸನ ಭಾರತದ ಷಟ್ಪದಿಗಳನ್ನ ಶ್ರಾವ್ಯವಾಗಿ ತರೀಕೆರೆಯ ಗಮಕಿಗಳಾದ ಶ್ರೀಮತಿ ಸುನೀತಾ ಅವರು ಹಾಡಿದರು. ಅದಕ್ಕೆ ಸೂಕ್ತ ವ್ಯಾಖ್ಯಾನವನ್ನು ಶಿವಮೊಗ್ಗದವರು ಮತ್ತು ಗಮಕಿಗಳಾದ ಶ್ರೀರಾಮ ಸುಬ್ಬರಾಯ ಶೇಟ್ ಅವರು ತಮ್ಮ ಅದ್ವಿತೀಯ ಪಾಂಡಿತ್ಯದಿಂದ ಸಭಿಕರನ್ನು ಮಂತ್ರ ಮುಗ್ಢರನ್ನಾಗಿಸಿದರು. ಭಾಗವಹಿಸಿದವರಿಗೆ ಸ್ಮರಣಿಕೆಗಳನ್ನು ನೀಡಿ ಸತ್ಕರಿಸಲಾಯಿತು.
ಮುಂದಿನ ಕಾರ್ಯಕ್ರಮ ಬಹುಭಾಷಾ ಕವಿ ಗೋಷ್ಟಿ. ಇದರ ಅಧ್ಯಕ್ಷತೆ ತೆಲಂಗಾಣಾ ಘಟಕದ ಶ್ರಿ ಚಂದಕಚರ್ಲ ರಮೇಶ ಬಾಬು ಅವರು ವಹಿಸಿದ್ದರು. ಗೋಷ್ಟಿಯ ಉದ್ಘಾಟನೆ ಡಾ. ಬಿ.ಕೆ ಮುನಿಸ್ವಾಮಿ, ಹಿರಿಯ ಸಾಹಿತಿಗಳು, ಪಾವಗಡ ಅವರು ತಮ್ಮ ಕವಿತೆಯೊಂದಿಗೆ ಮಾಡಿದರು. ಒಟ್ಟಿಗೆ ೨೧ ಕವಿಗಳು ತಮ ಕವಿತೆಗಳನ್ನು ವಾಚನ ಮಾಡಿದ್ದರು. ವಿವಿಧ ವಿಷಯಗಳ ಬಗ್ಗೆ ಕವಿಗಳು ವಾಚಿಸಿದ ಕವಿತೆಗಳು ಕೇಳುಗರಿಂದ ಚಪ್ಪಾಳೆ ಗಿಟ್ಟಿಸಿದವು. ಒಬ್ಬ ಕೊಂಕಣಿ ಕವಿ, ಐದು ತೆಲುಗು ಕವಿಗಳು ಮತ್ತು ಉಳಿದವರೆಲ್ಲ ಕನ್ನಡದ ಕವಿಗಳು ಸೇರಿ ಗೋಷ್ಠಿಯ ಬಹುಭಾಷಾ ಆಶಯಕ್ಕೆ ಪುಟ ಕೊಟ್ಟರು. ಕೊನೆಯಲ್ಲಿ ಅಧ್ಯಕ್ಷರಾದ ಶ್ರೀ ರಮೇಶಬಾಬು ಅವರು ಮಾತನಾಡುತ್ತ ಕವಿತೆ, ಕಾವ್ಯಗಳ ಬಗ್ಗೆ ಕನ್ನಡ ಮತ್ತು ತೆಲುಗು ಕವಿಗಳು ಹೇಳಿದ ಆಯ್ದ ಹೇಳಿಕೆಗಳನ್ನ ಸಭಿಕರ ಮುಂದಿಟ್ಟರು. ಕವಿತೆ ಬರೆಯುವಾಗ ಗಮನದಲ್ಲಿಟ್ಟುಕೊಳ್ಳ ಬೇಕಾದ ಅಂಶಗಳು ತಿಳಿಸುತ್ತ, ಇಂದು ಓದಿದ ಕವಿಗಳೆಲ್ಲರೂ ಈ ಅಂಶಗಳನ್ನ ಧ್ಯಾನದಲ್ಲಿಟ್ಟುಕೊಂಡು ತಮ್ಮ ಬರಹಗಳನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಕೊನೆಯಲ್ಲಿ ತಮ್ಮ ಕವಿತೆಯ ವಾಚನದೊಂದಿಗ ಗೋಷ್ಟಿಯನ್ನು ಮುಗಿಸಿದರು. ಭಾಗವಹಿಸಿದ ಎಲ್ಲ ಕವಿಗಳಿಗೆ ಗೌರವ ಕಾರ್ಯದರ್ಶಿಯಾದ ಶ್ರೀ ಪಟೇಲ್ ಪಾಂಡು ಅವರು ಸ್ಮರಣಿಕೆಗಳನ್ನು ನೀಡಿದರು.
ಇನ್ನು ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭ ನಡೆಯುವ ಮುನ್ನ, ಸಮ್ಮೇಳನಕ್ಕೆ ಬಂದ ಉತ್ಸಾಹೀ ಸದಸ್ಯರು ಭಾವ ಗೀತೆ, ಭಕ್ತಿಗೀತೆ, ಜಾನಪದ ಗೀತೆಗಳನ್ನು ಹಾಗೂ ಭರತನಾಟ್ಯ ನೃತ್ಯವನ್ನು ಪ್ರಸ್ತುತ ಪಡೆಸುತ್ತ ಸಭಿಕರಿಗೆ ಮನರಂಜನೆ ಒದಗಿಸಿದರು.
ಶ್ರೀಗಳವರ ಆಗಮನದೊಂದಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ತೆಲಂಗಾಣಾ ಘಟಕದ ಶ್ರೀಮತಿ ಉಷಾ ಮತ್ತು ಕುಮಾರಿ ವೈಷ್ಣವಿಯರ ಪ್ರಾರ್ಥನೆಯೊಂದಿಗೆ ಶುರುವಾಯಿತು. ಮೊದಲಿಗೆ ಸುಂದರ ರಾಮಲಲ್ಲಾ ವಿಗ್ರಹವನ್ನು ಕೆತ್ತಿ ಭಾರತದಾದ್ಯಂತ ಮನೆ ಮಾತಾಗಿರುವ ಖ್ಯಾತ ಶಿಲ್ಪಿಯಾದ ಶ್ರೀ ಅರುಣ್ ಯೋಗಿರಾಜ್ ಅವರು ಕೆತ್ತಿದ ಪ್ರಮುಖ ಶಿಲ್ಪಗಳ ಬಗ್ಗೆ ತೆಲಂಗಾಣಾ ಘಟಕದ ಅಧ್ಯಕ್ಷರಾದ ಶ್ರೀ ಗುಡುಗುಂಟಿ ವಿಠಲ್ ಜೋಶಿಯವರು ಸಭೆಗೆ ಪರಿಚಯ ಮಾಡಿಕೊಟ್ಟರು. ನಂತರ ಯೋಗಿರಾಜ್ ಅವರು ತಮಗೆ ಹೇಗೆ ಸಮ್ಮೇಳನಕ್ಕೆ ಬರಲು ಗುರು ರಾಘವೆಂದ್ರರ ಪ್ರೇರಣೆ ಸಿಕ್ಕಿತು ಎಂದು ಸಭೆಗೆ ತಿಳಿಸಿದರು.
ಅದಾದ ನಂತರ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಪಾಂಡಿತ್ಯದಿಂದ ಮಿಂಚಿರುವ ಪಂಡಿತ ಕೇಸರಿ ಮಹಾಮಹೋಪಾಧ್ಯಾಯರಾದ ವಿದ್ವಾನ್ ಶ್ರೀ ಗಿರಿಯಾಚಾರ್ಯರವರಿಗೆ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು. ತದನಂತರ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಂಡಿತರಾದ ಶ್ರೀಮತಿ ತಾರಾಮತಿ ಕುಲಕರ್ಣಿಯವರಿಗೆ ಸಾಹಿತ್ಯ ಪ್ರಶಸ್ತಿ ಕೊಟ್ಟು ಸತ್ಕರಿಸಲಾಯಿತು. ಅದೇ ವೇಳೆ ಅವರ ಕನ್ನಡ ಕೃತಿ “ಮರಳಿ ಅರಳಿತು ನೆನಪು” ಶ್ರೀಗಳ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಲಾಯಿತು. ಜೊತೆಗೆ ಶೃಂಗೇರಿಯವರಾದ ಶ್ರೀ ರಮೇಶ್ ಬೇಗಾರ್ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತು ನೀಡಿ ಸತ್ಕರಿಸಲಾಯಿತು.
ನಂತರ ಶ್ರೀ ಅರುಣ್ ಯೋಗಿರಾಜ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ “ಶಿಲ್ಪ ಸಿರಿ” ಪ್ರಶಸ್ತಿಯೊಂದಿಗೆ ಸತ್ಕರಿಸಲಾಯಿತು. ಹಾಗೆಯೇ, ಶ್ರೀಮಠದ ವತಿಯಿಂದ ಶ್ರೀಗಳವರು ಸತ್ಕರಿಸಿ ಆಶ್ರೀರ್ವದಿಸಿದರು.
ಮುಂದೆ ೫ ಘಟಕಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣ್ಯರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಘಟಕದ ಗೌರವ ಕಾರ್ಯದರ್ಶಿ ನಾಗರಾಜ್ ಗೋoದಕರ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಮರೂಪದಲ್ಲಿ ಕ.ಸಾ.ಪ ಅಧ್ಯಕ್ಷರಾದ ನಾಡೋಜ ಶ್ರೀ ಮಹೇಶ್ ಜೋಷಿಯವರು ಮತ್ತೊಮ್ಮೆ ಗುರು ರಾಘವೆಂದ್ರರ ಕೃಪೆಯ ಬಗ್ಗೆ ಮಾತನಾಡಿದರು. ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಸೂರಿ ಶ್ರೀನಿವಾಸ್ ಮತ್ತೊಮ್ಮೆ ಸಮ್ಮೇಳನ ಯಶಸ್ವಿಯಾಗಿ ನಡೆದರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಇಡೀ ಸಮ್ಮೆಳನದ ಕಾರ್ಯಕ್ರಮವನ್ನು ಸಮರ್ಥವಾಗಿ ನಿರೂಪಣೆ ಮಾಡಿದ ಶ್ರೀಮತಿ ರೂಪಾ ನಾಯಕ್ ಅವರನ್ನು ಸತ್ಕರಿಸಲಾಯಿತು. ಅವರೇ ವಂದನಾರ್ಪಣೆ ಮಾಡುವುದರ ಮೂಲಕ ಮಂತ್ರಾಲಯದಲ್ಲಿ ನಡೆದ ಪ್ರಪ್ರಥಮ ಅಂತರ ರಾಜ್ಯ ಕನ್ನಡ ಸಮ್ಮೇಳನ ಯಶಸ್ವಿಯಾಗಿ ಕೊನೆಗೊಂಡಿತು.