ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಬಹುಚರ್ಚಿತ ಬರ್ಚ ಬಾಯ್ ರೋಮಿಯೊ ಲೆನ್ ನೈಟ್ ಕ್ಲಬ್ ಭೀಕರ ಅಗ್ನಿ ಅವಘಡದ ನಂತರ ವಿದೇಶಕ್ಕೆ ಪರಾರಿಯಾಗಿದ್ದ ಕ್ಲಬ್ ಮಾಲೀಕರ ಶೋಧ ಕಾರ್ಯಕ್ಕೆ ಸಂಬಂಧಿಸಿದಂತೆ ಗೋವಾ ಪೋಲಿಸರಿಗೆ ದೊಡ್ಡ ಯಶಸ್ಸು ಲಭಿಸಿದಂತಾಗಿದೆ. ಈ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿಗಳ ಶೋಧಕ್ಕಾಗಿ ಅಂತರಾಷ್ಟ್ರೀಯ ಪೋಲಿಸ್ ಸಂಘಟನೆ ಯಿಂದ (Interpol) ಆರೋಪಿಗಳ ವಿರುದ್ಧ ಬ್ಲೂ ಕಾರ್ನರ್ (Blue Carner Notice) ಜಾರಿಗೊಳಿಸಲಾಗಿದೆ.
ಈ ಘಟನೆ ನಡೆದು ಎರಡೇ ದಿನದಲ್ಲಿ ಬ್ಲೂ ಕಾರ್ನರ್ (Blue Carner Notice) ಜಾರಿಗೊಳಿಸಲಾಗಿದೆ. ಇಂತಹ ಪ್ರಕರಣದಲ್ಲಿ ಅಂತರಾಷ್ಟ್ರೀಯ ನೋಟಿಸ್ ಜಾರಿಗೊಳಿಸಲು ಸಾಧಾರಣವಾಗಿ ಒಂದು ವಾರಕ್ಕಿಂತ ಹೆಚ್ಚು ಸಮಯ ಹಿಡಿಯುತ್ತದೆ ಎನ್ನಲಾಗಿದೆ. ಗೋವಾ ಪೋಲಿಸರ ಪ್ರಯತ್ನ ಹಾಗೂ ಕೇಂದ್ರ ತನಿಖಾ ದಳಕ್ಕೆ ಲಭಿಸಿದ ತ್ವರಿತ ಸಹಕಾರದಿಂದ ಅತ್ಯಂತ ಕಡಿಮೆ ಸಮಯದಲ್ಲಿ ಬ್ಲೂ ಕಾರ್ನರ್ ಜಾರಿಯಾಗಿದೆ. ಇದರಿಂದಾಗಿ ಆರೋಪಿಗಳು ಇನ್ನು ಹೆಚ್ಚುದಿನ ವಿದೇಶದಲ್ಲಿ ತಲೆ ಮರೆಸಿಕೊಳ್ಳಲು ಕಠಿಣವಾಗಲಿದೆ.
ಇಂಟರ್ ಪೋಲ್ ಜಾರಿಗೊಳಿಸಿರುವ ಬ್ಲೂ ಕಾರ್ನರ್ ನೋಟಿಸ್ ನಿಂದಾಗಿ ಆರೋಪಿಗಳ ಚಲನವಲನ ಪತ್ತೆಹಚ್ಚಲು ಸಹಾಯವಾಗಲಿದೆ. ಈ ನೋಟಿಸ್ ಇಂಟರ್ ಪೋಲ್ ನ 195 ಸದಸ್ಯ ದೇಶಗಳಿಗೆ ಕಳುಹಿಸಲಾಗುತ್ತದೆ. ಈ ನೋಟಿಸ್ ನಿಂದ ಸದಸ್ಯ ದೇಶಗಳು ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಸಹಾಯ ಮಾಡಲಿವೆ. ಈ ನೋಟಿಸ್ ಜಾರಿಯಾಗಿರುವುದರಿಂದ ಈಗಿರುವ ದೇಶ ಬಿಟ್ಟು ಬೇರೆ ದೇಶಕ್ಕೆ ಪಲಾಯನಗೈಯ್ಯಲೂ ಸಾಧ್ಯವಿಲ್ಲ. ಇದರಿಂದಾಗಿ ಈಗಿರುವ ಸ್ಥಳದಲ್ಲಿಯೇ ಆರೋಪಿಗಳನ್ನು ಸೆರೆ ಹಿಡಿಯಲು ಪೋಲಿಸರಿಗೆ ಸಾಧ್ಯವಾಗಲಿದೆ.
