ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಾಪ್ಸಾದ ಲಿಂಗಭಾಟ್ ಪರ್ರಾದಲ್ಲಿನ ನಾಗನಾಥ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ. ದೇವಸ್ಥಾನದ ಅರ್ಚಕರ ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಕಳ್ಳರು ದೇವಸ್ಥಾನದ ಬೀಗ ಒಡೆದು ದೇವಸ್ಥಾನದ ಒಳಗೆ ಪ್ರವೇಶಿಸಿದ ಅವರು ದೇವಸ್ಥಾನದ ಹುಂಡಿ ಒಡೆದು ಸುಮಾರು 30 ಸಾವಿರಕ್ಕೂ ಹೆಚ್ಚು ಹಣವನ್ನು ದೋಚಿರಬಹುದು ಎಂದು ಅಂದಾಜಿಸಲಾಗಿದೆ. ಪರ್ರಾ-ಕಲಂಗುಟ್ ರಸ್ತೆ ಬದಿಯಲ್ಲಿರುವ ಈ ದೇವಸ್ಥಾನದಲ್ಲಿ ಇದು ಮೂರನೇಯ ಬಾರಿ ಕಳ್ಳತನ ನಡೆದಿದೆ.

ಲಭ್ಯವಾಗಿರುವ ಮಾಹಿತಿಯ ಅನುಸಾರ- ದೇವಸ್ಥಾನದಲ್ಲಿ ಕಳ್ಳತನ ನಡೆಸಿವ ಮುನ್ನ ಕಳ್ಳರು ದೇವಸ್ಥಾನದ ಪರಿಸರದಲ್ಲಿಯೇ ಇರುವ ಅರ್ಚಕರ ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಈ ಕಳ್ಳತನ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಿಗ್ಗೆ ದೇವಸ್ಥಾನದ ಪೂಜೆಗೆ ತೆರಳಲು ಅರ್ಚಕರು ಮನೆಯ ಬಾಗಿಲು ತೆರೆಯಲು ನೋಡಿದರೆ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದರಿಂದ ಬಾಗಿಲು ತೆರೆಯಲಾಗಿರಲಿಲ್ಲ. ನಂತರ ಸ್ಥಳೀಯರು ಆಗಮಿಸಿದ ನಂತರ ದೇವಸ್ಥಾನಕ್ಕೆ ಹೋಗಿ ನೋಡಿದರೆ ದೇವಸ್ಥಾನದಲ್ಲಿ ದೇವರ ಹುಂಡಿ ಒಡೆದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದಲ್ಲಿ ಎಲ್ಲ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿತ್ತು.

ದೇವಸ್ಥಾನದ ಅಧ್ಯಕ್ಷ ವಾಸುದೇವ ಸಿರಸಾಟ ರವರು ಸ್ಥಳೀಯ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.