ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕನ್ನಡ ಸಂಘಟನೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಗೋವಾದಲ್ಲಿ ಎಲ್ಲ ಸಮುದಾಯವರನ್ನು ಸೇರಿಸಿ ಲೋಕಕಲ್ಯಾಣಾರ್ಥವಾಗಿ ಗೋವಾ ಕನ್ನಡ ಸಮಾಜ ಪಣಜಿ ವತಿಯಿಂದ ಗೋವಾ ರಾಜಧಾನಿ ಸಮೀಪದ ಪರ್ವರಿಯ ಆಜಾದ ಭವನದಲ್ಲಿ ಜನವರಿ 1 ರಂದು ಸಂಜೆ “ದೀಪ ನಮಸ್ಕಾರ” ದುರ್ಗಾರಾಧನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗೋವಾದ ವಿವಿಧ ಸಮುದಾಯದರನ್ನು ಒಗ್ಗೂಡಿಸಿ ದೀಪ ನಮಸ್ಕಾರ ಕಾರ್ಯಕ್ರಮ ನೆರವೇರಿಸಲಾಯಿತು. ಲೋಕಕಲ್ಯಾಣಾರ್ಥವಾಗಿ ಸಂಕಲ್ಪ ಮಾಡಿ, ಮಹಾಗಣಪತಿ ಪೂಜೆ, ಪುಣ್ಯಾಹವಾಚನೆ, ಮಂಡಲದಲ್ಲಿ ಸ್ಥಾಪಿಸಿದ ದೀಪಕ್ಕೆ ಪಂಚ ದುರ್ಗೆ ಆಹ್ವಾಹನೆ ಮಾಡಿ ದೀಪನಮಸ್ಕಾರ ಸೇವೆ ಸಲ್ಲಿಸಲಾಯಿತು.
ಗೋವಾ ಕನ್ನಡ ಸಮಾಜದ ಅಧ್ಯಕ್ಷರಾದ ಅರುಣಕುಮಾರ್ ರವರು ಆರಂಭದಲ್ಲಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪಣಜಿ ಮಹಾಪೌರ ರೋಹಿತ್ ಮೊನ್ಸೆರಾತ್, ರಾಜ್ಯಸಭಾ ಸದಸ್ಯ ಸದಾನಂದ ತಾನಾವಡೆ, ಗೋವಾ ವಿಧಾನಸಭೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಟಿ.ಎನ್ ಧ್ರುವಕುಮಾರ್, ಕ.ಸಾ.ಪ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ, ಗೋವಾ ಬಿಜೆಪಿ ಕರ್ನಾಟಕ ಸೆಲ್ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ಮಾಪ್ಸಾ ನಗರಸಭಾ ಅಧ್ಯಕ್ಷೆ ಪ್ರಿಯಾ ಮಿಶಾಳ, ಉಪಾಧ್ಯಕ್ಷ ಭಿವುಶೇಟ್, ಕೌನ್ಸಿಲರ್ ಆನಂದ ಬೈಂದಕರ್, ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ತಮಿಳು ಸಂಘದ ಅಧ್ಯಕ್ಷ ಶಿವಮಾರು, ಸೂರ್ಯಫೌಂಡೇಶನ್ ಅಧ್ಯಕ್ಷ ಮಹೇಶ ನಾಗವೇಕರ್, ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷೆ ಜಯಶ್ರೀ ಹೊಸ್ಮನಿ, ಪೊಂಡಾ ಕನ್ನಡ ಸಮಘದ ಅಧ್ಯಕ್ಷ ಶೈಲೇಶ್ ಪಾಟೀಲ್, ತುಳು ಕೂಟದ ಅಧ್ಯಕ್ಷ ಗಣೇಶ ಶೆಟ್ಟಿ ಇರ್ವತ್ತೂರು, ರಾಕೇಶ್ ಅಗರವಾಲ್ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದೀಪನಮಸ್ಕಾರ ಹಾಗೂ ದುರ್ಗಾರಾಧನೆ ಧಾರ್ಮಿಕ ವಿಧಿವಿಧಾನಗಳು ಪುರೋಹಿತರಾದ ಶ್ರೀನಾಥ ರಿಂಗೆ ಮತ್ತು ಇತರ ವೈದಿಕರು ನೆರವೇರಿಸಿದರು. ದೀಪಪೂಜೆಗೆ ಯಜಮಾನರಾಗಿ ಶ್ರೀಕಾಂತ್ ಆರ್.ರಿಂಗೆ ದಂಪತಿಗಳು, ಸಂದೇಶ ಗಾಡವಿ ದಂಪತಿಗಳು, ಸುಜಯ್ ರಾವ್ ದಂಪತಿಗಳು, ಸುರೇಶ್ ಕೊಟ್ಟಿಗೇರಿ ದಂಪತಿಗಳು, ಜಯಶ್ರೀ ಹೊಸ್ಮನಿ ದಂಪತಿಗಳು, ಸುಜಯ್ ರಾವ್ ದಂಪತಿಗಳು ಪೂಜೆ ನೆರವೇರಿಸಿದರು. ಶ್ರೀ ಲಲಿತಾ ಭಜನಾ ಮಂಡಳಿ ಮಾತೆಯರಿಂದ ಭಜನಾ ಕಾರ್ಯಕ್ರಮ, ಗುಮಟ ಆರತಿ, ವೇದಮಂತ್ರ ಪಠಣೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಗೋವಾ ಕನ್ನಡ ಸಮಾಜದ ವತಿಯಿಂದ ಎಲ್ಲರಿಗೂ ಸಹಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಗೋವಾ ಕನ್ನಡ ಸಮಾಜದ ಪದಾಧಿಕಾರಿಗಳು ಈ ಎಲ್ಲ ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆಗೆ ಶೃಮಿಸಿದರು.
