ಸುದ್ಧಿಕನ್ನಡ ವಾರ್ತೆ
Goa: ಗೋವಾ ಮತ್ತು ಕರ್ನಾಟಕದ ನಡುವಿನ ಮಹದಾಯಿ ನದಿ ನೀರು ಹಂಚಿಕೆ ಪ್ರಕರಣ ಮುಕ್ತಾಯವಾಗುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಕರ್ನಾಟಕದ ಕಳಸಾ-ಬಂಡೂರಿ ಕಾಮಗಾರಿಗೆ ಗೋವಾ ರಾಜ್ಯ ಸರ್ಕಾರ ಕ್ಯಾತೆ ತೆಗೆಯುತ್ತಲೇ ಇದೆ. ಇದರಿಂದಾಗಿ ಕರ್ನಾಟಕದ ಈ ಯೋಜನೆಗೆ ಹೆಚ್ಚಿನ ಅಡ್ಡಿಯುಂಟಾಗಿದೆ. ಇದೀಗ ಗೋವಾ ಸರ್ಕಾರ ಕರ್ನಾಟಕದ ಈ ಯೋಜನೆಯ ವಿರುದ್ಧ ಮತ್ತೊಂದು ಅಸ್ತ್ರ ಬಳಸಲು ಸಿದ್ಧತೆ ನಡೆಸಿದೆ.

ಸುಪ್ರೀಂ ಕೋರ್ಟ್‍ನಲ್ಲಿ ಮಹದಾಯಿ ಪ್ರಶ್ನೆಯ ವಿಚಾರಣೆ ನಡೆಯುತ್ತಿರುವಾಗಲೇ ಕರ್ನಾಟಕ ಭಾಂಡೂರ ನಾಲೆ (Kalasa Bhandura) ಕಾಮಗಾರಿಯನ್ನು ಪುನರಾರಂಭಿಸಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದ್ದು, ಕರ್ನಾಟಕಕ್ಕೆ ಪ್ರಶ್ನೆ ಕೇಳುವ ಪ್ರಕ್ರಿಯೆಗೆ ಗೋವಾ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಗೋಬಾ ರಾಜ್ಯ ಜಲಸಂಪನ್ಮೂಲ ಇಲಾಖೆ ಕರ್ನಾಟಕದ ಕಳಸಾ ಬಂಡೂರಿ ಕಾಮಗಾರಿಗೆ ಸಂಬಂಧಿಸಿದಂತೆ ವರದಿಯನ್ನು ಸೋಮವಾರ ಸರ್ಕಾರಕ್ಕೆ ಸಲ್ಲಿಸಿದ್ದು, ಈ ಕುರಿತು ಗೋವಾ ರಾಜ್ಯ ಸರ್ಕಾರ ಶೀಘ್ರದಲ್ಲೇ ಕರ್ನಾಟಕಕ್ಕೆ ಪತ್ರ ಕಳುಹಿಸಲಿದೆ ಎಂದು ರಾಜ್ಯ ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.

ಮಹದಾಯಿ ನದಿಯ ಮೇಲೆ ಕರ್ನಾಟಕದ ಯೋಜಿತ ಕಳಸಾ-ಭಂಡೂರ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ ವಿವರವಾದ ಯೋಜನಾ ವರದಿಯನ್ನು (DPR) ಕೇಂದ್ರ ಜಲ ಆಯೋಗ ಅನುಮೋದಿಸಿದ ನಂತರ, ರಾಜ್ಯ ಸರ್ಕಾರವು ಅದನ್ನು ತೀವ್ರವಾಗಿ ಆಕ್ಷೇಪಿಸಿತು. ಸರ್ಕಾರವು ಈ ವಿಷಯವನ್ನು ಸುಪ್ರೀಂ ಕೋರ್ಟ್‍ಗೆ ಕೊಂಡೊಯ್ದಿದೆ ಮತ್ತು ವಿಚಾರಣೆ ನಡೆಯುತ್ತಿರುವಾಗಲೇ ಕರ್ನಾಟಕವು ರಹಸ್ಯವಾಗಿ ಭಂಡೂರ ನಾಲಾ ಮತ್ತು ಮಹದಾಯಿ ನದಿಯ ನೀರನ್ನು ತಿರುಗಿಸಲು ಮುಂದಾಗಿದೆ. ಕರ್ನಾಟಕವು ಸಬ್‍ವೇಗಳನ್ನು ಬಳಸಿಕೊಂಡು ನೀರನ್ನು ತಿರುಗಿಸಲು ಯೋಜಿಸಿದೆ. ಅದಕ್ಕೆ ಬೇಕಾದ ಸಾಮಗ್ರಿಯನ್ನೂ ಭಂಡೂರ ನಾಲೆ ಪ್ರದೇಶಕ್ಕೆ ತರಲಾಗಿದೆ ಎಂದು ಗೋವಾ ರಾಜ್ಯ ಪರಿಸರವಾದಿ ರಾಜೇಂದ್ರ ಕೇರ್ಕರ್ ರವರು ಗೋವಾ ರಾಜ್ಯ ಜಲಸಂಪನ್ಮೂಲ ಇಲಾಖೆಗೆ ಈ ಮಾಹಿತಿ ನೀಡಿದ್ದಾರೆ.

 

ಅದರಂತೆ ಜಲಸ<ಪನ್ಮೂಲ ಇಲಾಖೆ ಸೋಮವಾರ ಸರಕಾರಕ್ಕೆ ವರದಿ ಸಲ್ಲಿಸಿದೆ. ಸರಕಾರದಿಂದ ಅನುಮೋದನೆ ದೊರೆತ ಕೂಡಲೇ ಈ ಬಗ್ಗೆ ಕರ್ನಾಟಕಕ್ಕೆ ಪತ್ರ ಕಳುಹಿಸಲಾಗುವುದು. ಸುಪ್ರೀಂ ಕೋರ್ಟ್‍ನ ಮುಂದಿನ ವಿಚಾರಣೆಯಲ್ಲೂ ಈ ವಿಷಯ ಪ್ರಸ್ತಾಪವಾಗಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಬೇಡಿಕೆಯಂತೆ ಕೇಂದ್ರ ಸರ್ಕಾರ ಮಹದಾಯಿಗೆ ಸಂಬಂಧಿಸಿದಂತೆ ಮಹದಾಯಿ ಪ್ರವಾಹ ಸಮಿತಿ ರಚಿಸಿದ್ದು, ಈ ಸಮಿತಿಯು ಮುಂಗಾರು ಹಂಗಾಮಿನಲ್ಲಿ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಮಹದಾಯಿ ಜಲಾನಯನ ಪ್ರದೇಶವನ್ನು ಪರಿಶೀಲಿಸಿ ವರದಿ ಸಲ್ಲಿಸಿದೆ. ಆದರೆ, ಮಹದಾಯಿ ನದಿಯನ್ನು ತಿರುಗಿಸಲು ಕರ್ನಾಟಕ ಮಾಡಿರುವ ಕಾಮಗಾರಿಗಳನ್ನು ವರದಿಯಲ್ಲಿ ಉಲ್ಲೇಖಿಸದ ಕಾರಣ, ಸರ್ಕಾರವು ಮಹದಾಯಿ ಪ್ರವಾಹ ಸಮಿತಿಯಿಂದ ಮರುಪರಿಶೀಲನೆಗೆ ಒತ್ತಾಯಿಸಿದೆ. ಮಹದಾಯಿ ಪ್ರವಾಹ ಸಮೀತಿಯ ಮುಂದಿನ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು, ಸಭೆಯ ದಿನಾಂಕವೂ ನಿಗದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.