ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಬಾಣಾವಲಿಯ ಕೊಠಡಿಯಿಂದ 1.20 ಲಕ್ಷ ರೂ ನಗದು, 2 ಲಕ್ಷ ರೂ ಮೌಲ್ಯದ ಚಿನ್ನದ ರುದ್ರಾಕ್ಷಿ ಸರವನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ವಾ ಪೋಲಿಸರು ಕರ್ನಾಟಕದಿಂದ ಆರೋಪಿ ಖಾಸಿಂ ಫಯಾಜ್ (36,ಕರ್ನಾಟಕದ ಉಡುಪಿ) ನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಈ ಹಿಂದೆ ನಾಲ್ಕು ಕಳ್ಳತನ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಅಕ್ಟೋಬರ್ 21 ರಂದು ಗೋವಾದ ಮಡಗಾಂವ ಬಾಣಾವಲಿಯ ಕರಾವಳಿ ಪ್ರದೇಶದ ಪಂಚತಾರಾ ಹೋಟೆಲ್ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿದ ಶಂಕಿತ ಖಾಸಿಂ ಫಯಾಜ್ ನಂತರ ಹೋಟೆಲ್ ಬಾಲ್ಕನಿಯಿಂದ ಮನೀಷಾ ವಿಸಾನ್ ರವರ ಕೋಣೆಗೆ ಪ್ರವೇಶಿಸಿ 2 ಲಕ್ಷ ರೂ ಚಿನ್ನದ ರುದ್ರಾಕ್ಷಿ ಸರ ಹಾಗೂ 40,000 ರೂ ನಗದನ್ನು ಕದ್ದಿದ್ದಾನೆ. ನಂತರ ಶಾನ್ ಪಟೇಲ್ ರವರ ಕೋಣೆಯಿಂದ 80,000 ರೂ ನಗದು ಕದ್ದಿದ್ದಾನೆ.

ಈ ಘಟನೆಯ ನಂತರ ಹೋಟೆಲ್ ವ್ಯವಸ್ಥಾಪಕಿ ಶೀತಲ್ ಸಿಂಗ್ ರವರು ಕೋಲ್ವಾ ಪೋಲಿಸರಿಗೆ ದೂರು ನೀಡಿದ ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.

ಆರೋಪಿಯು ಚಿನ್ನಾಭರಣಗಳನ್ನು ದಕ್ಷಿಣ ಕನ್ನಡದ ಚಿನ್ನದ ವ್ಯಾಪಾರಿ ಸುದರ್ಶನ ಆಚಾರ್ಯ ರವರಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೂ ಶಂಕಿತ ಆರೋಪಿಯ ಮನೆಯಲ್ಲಿ ಪೋಲಿಸರು ಹುಡುಕಾಟ ನಡೆಸಿದಾಗ ಯಾವುದೇ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿ ಕುಖ್ಯಾತ ಅಪರಾಧಿಯಾಗಿದ್ದು ಕರಾವಳಿ ಪ್ರದೇಶದ ಹೋಟೆಲ್ ಕೊಠಡಿಯಿಂದ ಕಳ್ಳತನ ಮಾಡಿದ್ದಕ್ಕಾಗಿ ಕೋಲ್ವಾ ಪೋಲಿಸರು ಈ ಹಿಂದೆಯೂ ಈತನನ್ನು ಬಂಧಿಸಿದ್ದರು ಎನ್ನಲಾಗಿದೆ.