ಸುದ್ಧಿಕನ್ನಡ ವಾರ್ತೆ
ಪಣಜಿ: ಜಿಲ್ಲಾ ಪಂಚಾಯತ್ 50 ಕ್ಷೇತ್ರಗಳಿಗೆ ಡಿಸೆಂಬರ್ 13 ರಂದು ಚುನಾವಣೆ ನಡೆಯಲಿದೆ. 2027 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ವೀಕ್ಷಕರು ಇದನ್ನು ಅಗ್ನಿ ಪರೀಕ್ಷೆ ಎಂದು ಪರಿಗಣಿಸುತ್ತಿದ್ದಾರೆ.

 

ಪ್ರಸ್ತುತ ಜಿಲ್ಲಾ ಪಂಚಾಯತ್‍ಗಳ ಅವಧಿ ಜನವರಿ 7, 2026 ರಂದು ಕೊನೆಗೊಳ್ಳುತ್ತದೆ. ಗೋವಾದಲ್ಲಿ 50 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿವೆ – ಪ್ರತಿ ಜಿಲ್ಲೆಯಲ್ಲಿ 25 ಸ್ತಾನಗಳಿವೆ.. ವಿವರವಾದ ವೇಳಾಪಟ್ಟಿಯನ್ನು ಗೋವಾ ರಾಜ್ಯ ಚುನಾವಣಾ ಆಯೋಗ ಹೊರಡಿಸಲಿದೆ. ನಿಗದಿಪಡಿಸಿದ ಸಮಯದ ನಡುವೆ ಅಭ್ಯರ್ಥಿಯು ತನ್ನ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗೆ ನಾಮಪತ್ರಗಳನ್ನು ಸಲ್ಲಿಸಬಹುದು ಎಂದು ಪಂಚಾಯತ್‍ಗಳ ಕಾರ್ಯದರ್ಶಿ ಚೇಸ್ತಾ ಯಾದವ್ ಹೇಳಿದರು.

 

ಜಿಲ್ಲಾ ಪಂಚಾಯತ್ ಚುನಾವಣೆಗಳು ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಸವಾಲಿನದ್ದಾಗಿರುತ್ತವೆ ಎಂದು ರಾಜಕೀಯ ವೀಕ್ಷಕರು ಹೇಳಿದರು. “ವಿಧಾನಸಭೆ ಚುನಾವಣೆಗೆ ಮುನ್ನ ಚುನಾವಣಾ ಬಲವನ್ನು ಪರಿಶೀಲಿಸುವುದು ರಾಜಕೀಯ ಪಕ್ಷಗಳಿಗೆ ಸೆಮಿಫೈನಲ್ ಇದ್ದಂತೆ” ಎಂದು ಅಭಿಪ್ರಾಯಪಡಲಾಗುತ್ತಿದೆ.
“ಜಿಪಂ ಚುನಾವಣೆಯ ನಂತರ, ಪುರಸಭೆ ಚುನಾವಣೆಗಳು ಮಾರ್ಚ್ 2026 ರಲ್ಲಿ ನಡೆಯಲಿವೆ. ಮುಂದಿನ ನಾಲ್ಕು ತಿಂಗಳಲ್ಲಿ ರಾಜಕೀಯ ಪಕ್ಷಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನರ ಮನಸ್ಥಿತಿಯನ್ನು ಅಳೆಯಲು ಸಾಧ್ಯವಾಗುತ್ತದೆ” ಎಂದು ರಾಜಕೀಯ ವೀಕ್ಷಕರೊಬ್ಬರು ಹೇಳಿದ್ದಾರೆ.
2025 ರ ಗೋವಾ ರಾಜ್ಯ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಥಾನಗಳನ್ನು ಕಾಯ್ದಿರಿಸುವ ಉದ್ದೇಶಕ್ಕಾಗಿ ಗೋವಾ ಸರ್ಕಾರ ಅಧಿಕೃತವಾಗಿ 19 ಸಮುದಾಯಗಳನ್ನು ಇತರ ಹಿಂದುಳಿದ ವರ್ಗಗಳ ರಾಜ್ಯ ಪಟ್ಟಿಯಲ್ಲಿ ಸೇರಿಸಿದೆ. ಗೋವಾ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಮತ್ತು ಶಿಫಾರಸುಗಳನ್ನು ಪರಿಗಣಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಿಂದುಳಿದ ವರ್ಗಗಳಾಗಿ ಅಧಿಸೂಚಿಸಲಾದ ಸಮುದಾಯಗಳು: ಕುಂಭಾರ್ (ಕ್ರಿಶ್ಚಿಯನ್ ಕುಂಭಾರ್ ಸೇರಿದಂತೆ), ತೇಲಿ, ಶಿಂಪಿ, ಕ್ರಿಶ್ಚಿಯನ್ ಮಹಾರ್, ಕಲೈಕರ್/ಕಮ್ಮಾರ/ಟಿನ್ಸ್ಮಿತ್, ಪಗುಯಿ/ಗಬಿತ್, ಕ್ರಿಶ್ಚಿಯನ್ ಬಾರ್ಬರ್, ಸತಾರ್ಕರ್, ಭಂಡಾರಿ ನಾಯಕ್, ಧೋಬಿ/ರಾಜಕ್/ಮದ್ವಲ್ (ಕ್ರಿಶ್ಚಿಯನ್ ಧೋಬಿ ಸೇರಿದಂತೆ), ನವಿ/ನೈ/ನಭಿಕ್/ನಪಿತ್/ಮಹಾಲೋ, ಕೋಲಿ/ಖಾರ್ವಿ (ಕ್ರಿಶ್ಚಿಯನ್ ಖಾರ್ವಿ ಸೇರಿದಂತೆ), ನಾಥಜೋಗಿ, ಗೋಸಾವಿ, ಧಂಗರ್, ವಿಶ್ವಕರ್ಮ/ಚಾರಿ/ಮೇಸ್ತಾ, ಠಾಕರ್, ಕೊಮಪರ್ಂತ್ ಮತ್ತು ಕ್ರಿಶ್ಚಿಯನ್ ರೆಂಡರ್.

2025 ರ ಜಿಲ್ಲಾ ಪಂಚಾಯತ್‍ಗಳ ಸಾರ್ವತ್ರಿಕ ಚುನಾವಣೆಗಳ ಸಂಪೂರ್ಣ ಅವಧಿಗೆ ಈ ಸೇರ್ಪಡೆ ಜಾರಿಯಲ್ಲಿರುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದ್ದು, ಅಧಿಸೂಚಿತ ಒಬಿಸಿ ಸಮುದಾಯಗಳ ಪರವಾಗಿ ಮೀಸಲಾತಿ ಒದಗಿಸುವುದನ್ನು ಖಚಿತಪಡಿಸುತ್ತದೆ.

ಕನ್ನಡಿಗರು ಕಣಕ್ಕೆ…
ಗೋವಾದಲ್ಲಿ ಪ್ರಸಕ್ತ ಜಿಪಂ ಚುನಾವಣೆಯಲ್ಲಿ ಕನ್ನಡಿಗರು ಸ್ಫರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಗೋವಾದ ಹಲವು ಕ್ಷೇತ್ರಗಳಲ್ಲಿ ಕನ್ನಡಿಗ ಮತದಾರರ ಪ್ರಾಭಲ್ಯ ಹೆಚ್ಚಿದೆ. ಇದರಿಂದಾಗಿ ಗೋವಾದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಮೂರ್ನಾಲ್ಕು ಜನ ಕನ್ನಡಿಗ ಸ್ಫರ್ಧಿಗಳು ಕಣಕ್ಕಿಳಿದು ಜಯಗಳಿಸಿದರೂ ಆಶ್ಚರ್ಯವಿಲ್ಲ.